ಬೆಂಗಳೂರು : ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರವನ್ನು ಚರ್ಚಿಸಲು ಇನ್ನೂ ಸಮಯವಿದೆ. ತಂದೆಯವರ ಆರೋಗ್ಯ ವೃದ್ಧಿ ಗಾಗಿ ಇಂದು ಪೂಜೆ ಸಲ್ಲಿಸಿದ್ದೇನೆ. ನಮ್ಮ ಕುಟುಂಬದಲ್ಲಿ ಇತ್ತಿಚೆಗೆ ನಡೆದ ಬೆಳವಣಿಗೆ, ಆರೋಗ್ಯ ವೃದ್ದಿಗೆ ಪೂಜೆ ಮಾಡಿದ್ದೇನೆ. ಹಿಂದೂ ಧರ್ಮದ ಸಂಪ್ರದಾಯದಂತೆ ಪೂಜೆ ನೆರವೇರಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿಂದು ತಿರುಮಲಗಿರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಈಗ ತಂದೆಯವರ ಆರೋಗ್ಯದಲ್ಲಿ ವೃದ್ದಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಇನ್ನೂ ಸಮಯಾವಕಾಶ ಇದೆ ಎಂದು ತಿಳಿಸಿದರು.
ಇದನ್ನೂ ಓದಿ : ತಮಿಳುನಾಡಿಗೆ ಕಾವೇರಿ ನೀರು ನಿಂತರೂ ಮುಂದುವರಿದ ರೈತರ ಪ್ರತಿಭಟನೆ
ಯಡಿಯೂರಪ್ಪ ಘೋಷಿಸಿದ್ದ ಕಮಲ-ದಳ ಮೈತ್ರಿ ವಿಚಾರ..
2024ರ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಜಾತ್ಯತೀತ ಜನತಾ ದಳ (ಜೆಡಿಎಸ್) ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶುಕ್ರವಾರವಷ್ಟೇ ಘೋಷಿಸಿದ್ದರು.
ನಗರದ ಫ್ರೀಡಂ ಪಾರ್ಕ್ ನಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಂತೋಷ ತಂದಿದೆ. ಜೆಡಿಎಸ್ ಗೆ ನಾಲ್ಕು ಸೀಟ್ ಕೊಡಲು ಅಮಿತ್ ಶಾ ಒಪ್ಪಿಕೊಂಡಿದ್ದಾರೆ. ಮೈತ್ರಿಯಿಂದ ನಮ್ಮಗೆ ಶಕ್ತಿ ಬಂದಿದೆ. ಇದರಿಂದ 25ಕ್ಕೂ ಹೆಚ್ಚು ಸೀಟ್ ಗೆಲ್ಲಲು ನಮಗೆ ಸಹಾಯವಾಗಲಿದೆ ಎಂದಿದ್ದರು.
ಇದನ್ನೂ ಓದಿ : ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಂಗಿಲ್ಲ: ಬಿಬಿಎಂಪಿ
ಬಿಜೆಪಿ-ಜೆಡಿಎಸ್ ಮೈತ್ರಿ ಹಿಂದಿದೆ ದೊಡ್ಡ ಪ್ಲಾನ್..
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ ರಾಷ್ಟ್ರೀಯ ಪಕ್ಷ ಬಿಜೆಪಿ ಪ್ರಾದೇಶಿಕ ಪಕ್ಷ ಜೆಡಿಎಸ್ ಜೊತೆ ಹೋಗಿರುವುದರ ಹಿಂದೆ ದೊಡ್ಡದೊಂದು ಪ್ಲಾನ್ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬಿಜೆಪಿಯಿಂದ ರಹಸ್ಯ ಸರ್ವೆ : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿರುವ ಹಿನ್ನೆಲೆ, ಲೋಕಸಭೆ ಚುನಾವಣೆ ಗೆಲ್ಲಲು ಪಕ್ಷದ ಹೈಕಮಾಂಡ್ ರಣತಂತ್ರ ಹೂಡಿದ್ದು, ಇದರ ಭಾಗವಾಗಿ ರಹಸ್ಯ ಸರ್ವೆ ನಡೆಸಿದೆ ಎಂದು ಹೇಳಲಾಗ್ತಿದೆ. ಒಂದು ಬಾರಿ ಸಂಘ ಪರಿವಾರದಿಂದ ಮತ್ತು ಇನ್ನೆರಡು ಬಾರಿ ಖಾಸಗಿ ಏಜೆನ್ಸಿಗಳಿಂದ ಸರ್ವೆ ಮಾಡಿಸಲಾಗಿದೆಯಂತೆ.
ಒಟ್ಟು ಮೂರು ಬಾರಿ ಸರ್ವೆ ಮಾಡಿದಾಗಲೂ, ಬಿಜೆಪಿ ಕೇವಲ 8ರಿಂದ 10 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ವಿಧಾನಸಭಾ ಚುನಾವಣೆಗೆ ನೀಡಿರುವ ಗ್ಯಾರಂಟಿ ಯೋಜನೆಗಳು ಇನ್ನೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ ಮಾತ್ರ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಬಹಿರಂಗವಾಗಿದೆಯಂತೆ. ಹಾಗಾಗಿ, ಬಿಜೆಪಿ ಜೆಡಿಎಸ್ ಹಿಂದೆ ಹೋಗಿದೆ ಎನ್ನಲಾಗ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.