ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷವು, ತನ್ನ ಸ್ಥಾನಗಳನ್ನು ಭದ್ರಗೊಳಿಸಿಕೊಳ್ಳಲು ಹಾಗೂ ಪಕ್ಷವನ್ನು ಇನ್ನಷ್ಟು ಗಟ್ಟಿಯಾಗಿಸುವ ಮೂಲಕ ಬಂಡಾಯದ ಬಾವುಟ ಹಾರಬಾರದೆಂಬ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಸನದಲ್ಲಿ ಎಲ್ಲ ಶಾಸಕರನ್ನು ಕರೆಯಿಸಿ ಸಭೆ ನಡೆಸಿ ಕಾಂಗ್ರೆಸ್‌ಗೆ ಒಗ್ಗಟ್ಟಿನ ಸಂದೇಶ ರವಾನಿಸಿದ್ದರು.
ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕುಮಾರಸ್ವಾಮಿಯವರು, ಬಿಜೆಪಿಯಂತೆ ಪ್ರಬಲ ಹಿಂದುತ್ವದ ಅಸ್ತ್ರ ಪ್ರಯೋಗಿಸಲು ಸಿದ್ದತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿನ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಲಿಂಗಾಯತ ಹಾಗೂ ಒಕ್ಕಲಿಗ ಕಾರ್ಡ್ ಪ್ಲೇ ಮಾಡಲಿರುವ ಮೈತ್ರಿ ಪಕ್ಷಗಳು, ಇದಕ್ಕಾಗಿ ದತ್ತಾಮಾಲೆ ಅಭಿಯಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳಲು ಪ್ಲಾನ್ ರೂಪಿಸುತ್ತಿವೆ.
ಇದನ್ನೂ ಓದಿ : ಹೆಚ್‌ಡಿಕೆ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ: ಡಿಸಿಎಂ ಡಿಕೆಶಿ ಹೇಳಿದ್ದೇನು?
ಹಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ನೇಮಕವಾದ ಬೆನ್ನಲ್ಲೇ ಮತ್ತಷ್ಟು ಚುರುಕಾಗಿರುವ ದಳಪತಿಗಳು ಪ್ರಬಲವಾದ ರಾಜಕೀಯ ದಾಳಗಳನ್ನು ಉರುಳಿಸುತ್ತಿದ್ದಾರೆ. ಈ ಮೊದಲು ಹಿಂದುತ್ವವನ್ನು ಕಟುವಾಗಿ ಟೀಕಿಸುತ್ತಿದ್ದ ಕುಮಾರಸ್ವಾಮಿಯವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಖದ್ದಾಗಿ ಹಿಂದುತ್ವದ ಮಂತ್ರ ಜಪಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ದಳಪತಿ ದತ್ತಮಾಲೆಯನ್ನು ಧರಿಸುವ ಮೂಲಕ ದತ್ತಮಾಲಾ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಮುಂಬರುವ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಈ ಕಾರ್ಯಕ್ರಮ. ಇದರ ರೂಪುರೇಷೆಗಳ ಬಗ್ಗೆ ಈಗಾಗಲೇ ಕುಮಾರಸ್ವಾಮಿಯವರು ಚಿಕ್ಕಮಗಳೂರು ಜಿಲ್ಲಾ ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿದ್ದಾರೆ. ಬಾಬಾಬುಡನ್ ಗಿರಿಯ ದತ್ತಾತ್ರೇಯ ಗುರುಗಳಿಂದ ಮಾಲೆಯನ್ನು ಸ್ವೀಕರಿಸುವ ಬಗ್ಗೆ ಮಾಹಿತಿ ದೊರೆತಿದ್ದು, ಈ ಕಾರ್ಯಕ್ಕೆ ಕುಮಾರಸ್ವಾಮಿಯವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ದತ್ತಾತ್ರೇಯ ಮಾಲಾಧಾರಣೆಯ ಮೂಲಕ ಹಿಂದುತ್ವದ ಅಜೆಂಡಾಗೆ ಜೆಡಿಎಸ್ ಪಕ್ಷದ ವತಿಯಿಂದ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಇವರಿಗೆ ಬೆಂಬಲವಾಗಿ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ದತ್ತ ಮಾಲೆಯನ್ನು ಧರಿಸಿ ಸಾಥ್ ನೀಡಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ಮೈತ್ರಿ ಪಕ್ಷಗಳು ತಮ್ಮ ಗೆಲುವಿನ ನಾಗಾಲೋಟದಿಂದ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕುವ ಮೂಲಕ ಅದಕ್ಕೆ ಸೋಲಿನ ರುಚಿ ತೋರಿಸಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಪ್ರಬಲ ಹಿಂದುತ್ವದ ಕಾರ್ಡ್ ಪ್ಲೇ ಮಾಡುತ್ತಿರುವ ಕುಮಾರಸ್ವಾಮಿ ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಪಡೆಯಲು ರಣತಂತ್ರ ಹೆಣೆಯುತ್ತಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.