ಬೆಂಗಳೂರು : ಕಾವೇರಿ ನದಿಯಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ. ನಮ್ಮ ಜಲಾಶಯಗಳೆಲ್ಲ ಖಾಲಿ ಆಗಿವೆ, ಬೆಂಗಳೂರಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಆಗಿದೆ. ಇಂಥ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಗೆ ಸರ್ಕಾರ ಮೇಲ್ಮನವಿ ಸಲ್ಲಿಸಲಿ. ಅಲ್ಲಿ ರಾಜ್ಯದ ವಾಸ್ತವಿಕ ಪರಿಸ್ಥಿತಿ ತಿಳಿಸಲಿ. ಅಗತ್ಯ ಬಿದ್ದರೆ ಪ್ರಾಧಿಕಾರದ ನಿಯೋಗ ರಾಜ್ಯಕ್ಕೆ ಬಂದು ವಾಸ್ತವಿಕ ಸ್ಥಿತಿ ನೋಡಿ ತೀರ್ಮಾನ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ನಾವು ನೀರು ಬಿಡುವ ಸ್ಥಿತಿಯಲ್ಲಿ ಇಲ್ಲ, ಎಂಬುವುದನ್ನು ಸುಪ್ರೀಂಕೋರ್ಟ್‌ಗೆ ಹಾಗೂ ನದಿ ನೀರು ಪ್ರಾಧಿಕಾರಕ್ಕೆ ಮನದಟ್ಟು ಮಾಡುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ : ಸಂಸತ್ ಭವನದಲ್ಲಿ ಫೋಟೋ ಸೆಷನ್ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಬಿಜೆಪಿ ಸಂಸದ!
ತಮಿಳುನಾಡು ಸಂಸದರು ಕೇಂದ್ರದ ಜಲಶಕ್ತಿ ಸಚಿವರನ್ನು ಭೇಟಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಯಾರನ್ನಾದರೂ ಭೇಟಿ ಮಾಡಲಿ. ಅವರ ಬಗ್ಗೆ ನಾನು ಚರ್ಚೆ ಮಾಡಲು ಇಷ್ಟಪಡುವುದಿಲ್ಲ. ಈ ವಿಚಾರದಲ್ಲಿ ನಾವು ಏನು ಹೇಳಬೇಕೋ ಅದನ್ನು, ಸರ್ಕಾರಕ್ಕೆ ಹೇಳಿದ್ದೇವೆ. ಸುಪ್ರೀಂಕೋರ್ಟ್ ಗೆ ಸರ್ಕಾರ ಮೇಲ್ಮನವಿ ಸಲ್ಲಿಸಿ ನೀರಿನ ವಾಸ್ತವ ಸ್ಥಿತಿ ತಿಳಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ಶೇಖಾವತ್ ಭೇಟಿಯಾಗಿದ್ದ ತಮಿಳುನಾಡು ಸಂಸದರು..
ಕರ್ನಾಟಕದಿಂದ ತಮಿಳುನಾಡಿಗೆ 5000 ಕ್ಯೂಸೆಕ್ಸ್ ನೀರು ಹರಿಸುವಂತೆ ಸೂಚನೆ ನೀಡಿದ ಬೆನ್ನಲ್ಲಿಯೇ, ತಮಿಳುನಾಡು ಸಂಸದರು ಒಗ್ಗಟ್ಟಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಇಂದು ಭೇಟಿಯಾಗಿ, ಹೆಚ್ಚಿನ ನೀರನ್ನು ಹರಿಸುವಂತೆ ಬೇಡಿಕೆ ಇಟ್ಟಿದ್ದಾರೆ.
ರಾಷ್ಟ್ರಮಟ್ಟದ ನದಿ ನೀರು ಹಂಚಿಕೆ ವಿವಾದದಲ್ಲಿ ಪ್ರಮುಖವಾದ ಕರ್ನಾಟಕ – ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮತ್ತೆ ಸೋಲಾಗಿದೆ. ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಲಾಗಿದೆ. ಇದರ ಬೆನ್ನಲ್ಲಿಯೇ ತಮಿಳುನಾಡು ಸಂಸದರು ಒಗ್ಗಟ್ಟಾಗಿ ಹೋಗಿ ಕೇಂದ್ರದ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಹೆಚ್ಚಿನ ನೀರು ಹರಿಸುವುದಕ್ಕೆ ಕರ್ನಾಟಕದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಆದರೆ, ಕರ್ನಾಟಕ ಸಂಸದರು ಒಗ್ಗಟ್ಟು ಪ್ರದರ್ಶನ ಅಥವಾ ಕೇಂದ್ರ ಸಚಿವರ ಭೇಟಿ ಮಾಡಿದ ನಿದರ್ಶನಗಳು ಕಂಡುಬಂದಿಲ್ಲ.
ಕರ್ನಾಟಕದಲ್ಲಿ ಮಳೆ ಕೈ ಕೊಟ್ಟಾಗಲೆಲ್ಲಾ ತಮಿಳುನಾಡು ರಾಜ್ಯದಿಂದ ಕಾವೇರಿ ನೀರಿಗಾಗಿ ಕ್ಯಾತೆ ತೆಗೆಯಲಾಗುತ್ತದೆ. ಈ ವರ್ಷ ರಾಜ್ಯದಲ್ಲಿ ಶೇ.35 ರಷ್ಟು ಮಾತ್ರ ಮಳೆಯಾಗಿದ್ದು, ಕಾವೇರಿ ನದಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲದೇ ಸಂಕಷ್ಟ ಅನುಭವಿಸುವಂತಾಗಿದೆ.
ಆದರೆ, ಈ ನಡುವೆಯೂ ಈಗಾಗಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWRC) ಹಾಗೂ ಕಾವೇರಿ ನೀರು ನಿರ್ವಹಣಾ ಸಮಿತಿ (CWMA) ಸಭೆಗಳಲ್ಲಿ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ಹೊರಡಿಸಲಾಗಿದೆ. ಈಗ ಮತ್ತಷ್ಟು ಹೆಚ್ಚುವರಿ ನೀರು ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ತಮಿಳುನಾಡಿನ ಸಂಸದರು ಹೋಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.