Sunday, October 1, 2023
spot_img
- Advertisement -spot_img

‘ಬೀದಿ ಪಾಲಾದ್ರು, ಬ್ಯಾರಿಕೇಡ್ ಹಿಂದೆ ನಿಂತ್ರು ಎಂಬ ಹೇಳಿಕೆ ಕಾಂಗ್ರೆಸ್ ಮನಸ್ಥಿತಿ ತೋರಿಸುತ್ತೆ’

ಬೆಂಗಳೂರು: ಬಿಜೆಪಿ ನಾಯಕರು ಬೀದಿ ಪಾಲಾದ್ರು, ಬ್ಯಾರಿಕೇಡ್ ಬಂಧಿಯಾದ್ರು ಎಂದು ಕಾಂಗ್ರೆಸ್ ಪಕ್ಷದವರು ನೀಡಿರುವ ಹೇಳಿಕೆಗಳು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಮಾತನಾಡಿದ ಬೊಮ್ಮಾಯಿ, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಮೋದಿ ನಗರಕ್ಕೆ ಬಂದಿದ್ದಾಗ ಬ್ಯಾರಿಕೇಡ್ ಹಿಂದೆ ನಿಂತಿದ್ದ ಬಿಜೆಪಿ ಮುಖಂಡರನ್ನು ಟೀಕಿಸಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.

ಪ್ರಧಾನಮಂತ್ರಿಗಳ ಪ್ರೋಟೋಕಾಲ್‌ನಲ್ಲಿ ಯಾವುದೇ ಗೊಂದಲ ಇರಲಿಲ್ಲ; ನಾವೆಲ್ಲ ಸಾರ್ವಜನಿಕ ಜೀವನಕ್ಕೆ ಬಂದಿರೋದು ಸೇವೆ ಮಾಡುವುದಕ್ಕೆ. ಇಸ್ರೋದಂಥ ದೊಡ್ಡ ಸಂಸ್ಥೆಯ ವಿಜ್ಞಾನಿಗಳು ಇಂಥ ಸಾಧನೆ ಮಾಡಿದಾಗ ನಾವು ಒಂದು ಹೆಜ್ಜೆ ಹಿಂದೆ ಸರಿಯಬೇಕು. ನಾವು ಹಿಂದೆ ಸರಿಯುವ ಮೂಲಕ ಅವರಿಗೆ ಮಹತ್ವ ಕೊಡಬೇಕು. ಆ ಕೆಲಸವನ್ನು ನಮ್ಮ ನಾಯಕರು (ಬ್ಯಾರಿಕೇಡ್ ಹಿಂದೆ ನಿಂತ ಬಿಜೆಪಿ ಶಾಸಕರು ಹಾಗೂ ಸಂಸದರು) ಮಾಡಿದ್ದಾರೆ. ಸೇವಾ ಮನೋಭಾವದಿಂದ ಸಾಮಾನ್ಯ ಜನರ ನಡುವೆ ನಿಂತಿದ್ದಾರೆ’ ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ; ‘ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ’ ಎಂದು ಬಿಜೆಪಿಗರ ಕಾಲೆಳೆದ ಕಾಂಗ್ರೆಸ್!

‘ನಮ್ಮ ನಾಯಕರ ದೊಡ್ಡತನ ತಿಳಿದುಕೊಳ್ಳುವ, ಹೊಗಳುವ ಮನಸ್ಸುಗಳು ಬೇಕಷ್ಟೇ. ಇಸ್ರೋ ಅಧ್ಯಕ್ಷರು ಮೂರು ನಿಮಿಷ ಮಾತಾಡಿ ಸಾಧನೆಗೆ ಕಾರಣರಾದ ವಿಜ್ಞಾನಿಗಳನ್ನು ಮುಂದೆ ಬಿಟ್ರು. ಇದರರ್ಥ ಇಸ್ರೋ ಅಧ್ಯಕ್ಷರು ಹಿಂದೆ ಸರಿದರು ಅಂತರ್ಥವಲ್ಲ; ನಮ್ಮ ನಾಯಕರು ಹಿಂದೆ ಸರಿದು ನಿಂತು ಜನರನ್ನು ಮುಂದೆ ಬಿಟ್ಟಿದ್ದಾರೆ. ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸಲು ಪ್ರಧಾನಿಯವರು ಬಂದಾಗ ಜನರ ಮಧ್ಯೆ ನಿಂತಿದ್ದಾರೆ. ಇವತ್ತಿನ ದಿನ ಎಲ್ರೂ ತಮ್ಮ ಸ್ಥಾನಮಾನಕ್ಕೆ ಪೈಪೋಟಿ ಮಾಡ್ತಾರೆ. ಆದರೆ, ಅವರೆಲ್ಲಾ ಅನುಕರಣೀಯ ನಡವಳಿಕೆ ತೋರಿದ್ದಾರೆ’ ಎಂದು ಬೊಮ್ಮಾಯಿ ಹೊಗಳಿದರು.

‘ಬಿಜೆಪಿ ನಾಯಕರು ಬೀದಿ ಪಾಲಾದ್ರು, ಬ್ಯಾರಿಕೇಡ್ ಬಂಧಿ ಆದ್ರು ಅಂತ ಕಾಂಗ್ರೆಸ್ ನವ್ರು ಹೇಳಿರೋದು ಅವರ ಮನಸ್ಥಿತಿ ತೋರಿಸುತ್ತದೆ; ಇದಕ್ಕಿಂತ ನಾನು ಹೆಚ್ಚಿಗೆ ಏನೂ ಹೇಳಲ್ಲ’ ಎಂದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles