ಬೆಂಗಳೂರು: ನಗರದ ಪ್ರತಿಷ್ಠಿತ ಬಿಎಂಎಸ್ ಕಾಲೇಜು ಟ್ರಸ್ಟ್, ಜಮೀನು ಅಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್ ಶಾಮೀಲಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಸಚಿವ ಡಾ.ಅಶ್ವತ್ಥ್ ನಾರಾಯಣ್ ಸದನದಲ್ಲಿಯೇ ಉತ್ತರ ನೀಡಿದ್ದು, ಇಬ್ಬರ ನಡುವೆ ಪರಸ್ಪರ ವಾಗ್ವಾದವೇ ನಡೆಯಿತು. ಒಂದು ಹಂತದಲ್ಲಿ ವಿಧಾನಸಭೆಯಲ್ಲಿ ಅಶ್ವತ್ಥ್ ನಾರಾಯಣ್ ಮತ್ತು ಕುಮಾರಸ್ವಾಮಿ ಏಕವಚನದಲ್ಲಿ ವಾಗ್ವಾದಕ್ಕೆ ಇಳಿದರು. ನನ್ನ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ ಇದೆಯಾ? ಎಂದು ಇಬ್ಬರ ನಡುವೆ ಏರುಧನಿಯಲ್ಲಿ ಮಾತಿನ ಚಕಮಕಿ ನಡೆಯಿತು. ನಂತರ ಹೆಚ್‌ಡಿಕೆ ಮಾತನಾಡಿ, ಈ ಸ್ಟೋರಿ ನಾನು ತೆಗೆದಿದ್ದು ಅಲ್ಲ. ನೀವು ಕ್ರಿಯೇಟ್ ಮಾಡಿಕೊಂಡಿರುವ ಸ್ಟೋರಿ ಇದು. ಕೆಜಿಎಫ್ ಅಲ್ಲ ಇದು ಎಂದು ಸಚಿವ ಅಶ್ವಥ್ ನಾರಾಯಣ್‌ಗೆ ಟಾಂಗ್ ನಿಡಿದ್ರು. ನಂತರ ನನ್ನ ಬಗ್ಗೆ ಮಾತನಾಡಲು ನಿಮಗೆ ಯೋಗ್ಯತೆ ಇಲ್ಲವೆಂದ ಹೆಚ್‌ಡಿಕೆಗೆ ನಿಮಗೂ ನನ್ನ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲವೆಂದು ಡಾ. ಅಶ್ವತ್ಥ್ ಉತ್ತರಿಸಿದರು. ಆ ವೇಳೆ ಸ್ಪೀಕರ್ ಕಾಗೇರಿ ಅವರು ಮಧ್ಯ ಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು. ಯಾವ ಉದ್ದೇಶಕ್ಕಾಗಿ ಈ ವಿಷಯ ತಗೊಂಡಿದ್ದು? ನಾವು ಮಾಡೋಕೆ ಆಗದೇ ಇದ್ದಾಗ ಈ ಸಂಸ್ಥೆ ಒಳ್ಳೆಯ ಕೆಲಸ ಮಾಡ್ತಿದೆ. ಒಳ್ಳೆಯ ಸಂಸ್ಥೆಯನ್ನು ನಾಶ ಮಾಡೋಕೆ ಬಹಳ ಹೊತ್ತು ಏನೂ ಬೇಕಿಲ್ಲ. ಸರ್ಕಾರ ಏನು ಬೇಕಾದರೂ ಮಾಡಬಹುದು. ಆದರೆ ನಾವು ಆ ರೀತಿ ಮಾಡಿಲ್ಲ. ಸರ್ಕಾರ ಮಾಡದ ಗುಣಮಟ್ಟದ ಶಿಕ್ಷಣವನ್ನು ಸಂಸ್ಥೆ ಕೊಡ್ತಿದೆ. ಅಂತಹ ಸಂಸ್ಥೆಯನ್ನು ನಾವು ಮುಗಿಸಿಬಿಡುವುದಾ? ಏನು ಬಂತು? ಏನು ಬಿಡ್ತು ಅಂತಾ ಸುಮ್ಮನೆ ರಾಜಕಾರಣ ಮಾಡೋದಾ? ಎಂದು ಕುಮಾರಸ್ವಾಮಿಗೆ ಸಚಿವ ಅಶ್ವಥ್ ನಾರಾಯಣ್ ತಿರುಗೇಟು ನೀಡಿದರು.