ಭಾರತೀನಗರ: ಬಿಜೆಪಿ ಸರ್ಕಾರ ರಾಜ್ಯದ ಮುಗ್ದಜನರನ್ನು ವಂಚಿಸುತ್ತಲೇ ಬರುತ್ತಿದೆ. ಜನರಿಗಾಗಿ, ರಾಜ್ಯ ಅಭಿವೃದ್ಧಿಗೆ ಯಾವುದೇ ಮಹತ್ವ ನೀಡಿಲ್ಲ. ಜನರ ತೆರಿಗೆ ಹಣ ದುರುಪಯೋಗವಾಗುತ್ತಿದೆ, ಇಂದು ಕೃಷಿಕರ ಬದುಕು ಸಂಕಷ್ಟದ ಸರಮಾಲೆಯಾಗಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬೇಸರಿಸಿದರು.
ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿ, ರಾಜ್ಯದ ಖಜಾನೆ ತುಂಬಿಸುವ ಜನರು ಸಂಕಷ್ಟದಲ್ಲಿದ್ದರೆ ಬಿಜೆಪಿ ಸರ್ಕಾರ ಖಜಾನೆ ದುಡ್ಡಲ್ಲಿ ಮೋಜು ಮಾಡುತ್ತಿದೆ, ಹವಾಮಾನ ವೈಪರಿತ್ಯದಿಂದ ಅಕಾಲಿಕವಾಗಿ ಮಳೆಯಿಂದಾಗಿ ಬೆಳೆ ಕಳೆದುಕೊಳ್ಳುವ ರೈತರಿಗೆ ಅಧಿಕಾರ ನಡೆಸುವ ಸರ್ಕಾರಗಳು ನೆರವಿಗೆ ಬಾರದಿರುವುದು ವಿಪರ್ಯಾಸದ ಸಂಗತಿ. ಇದರಿಂದ ಯುವ ಜನಾಂಗ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದರು.
ಜೆಡಿಎಸ್ ಸರ್ಕಾರ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಮುಂದಿನ ದಿನಗಳಲ್ಲಿ ಕೃಷಿ ಕಡೆಗೆ ಯುವ ಜನಾಂಗವನ್ನು ಸೆಳೆಯಲು ಪಂಚರತ್ನ ಯೋಜನೆಯಲ್ಲಿ ರೈತ ಬಂಧು ಹೆಸರಿನಲ್ಲಿ ಯೋಜನೆ ಜಾರಿ, ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಅಗತ್ಯಕ್ರಮ, ಆರೋಗ್ಯ ಯೋಜನೆ ಜಾರಿಗೊಳಿಸುವುದು. ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.