ಮಂಡ್ಯ: ಭಗವಂತ ಯಾರ ಹಣೆ ಮೇಲೆ ಏನು ಬರೆದಿದ್ದಾನೋ ಗೊತ್ತಿಲ್ಲ. ಬಹಳ ಜನರಿಗೆ ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿದೆ. ರಾಜ್ಯದ ಜನರೇ ಈ ಬಾರಿ ಜೆಡಿಎಸ್ ಪಕ್ಷ ಬೆಂಬಲಿಸಲಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಮಳವಳ್ಳಿ ತಾಲೂಕಿನ ಕನ್ನಹಳ್ಳಿಯಲ್ಲಿ ಬಸವ ಭವನ ಶಂಕು ಸ್ಥಾಪನೆ ಉದ್ಘಾಟಿಸಿ ಮಾತನಾಡಿದ ಅವರು, ಕಟ್ಟಡ ನಿರ್ಮಾಣ ಆಗುವಷ್ಟರಲ್ಲಿ ಮುಂದಿನ ಸರ್ಕಾರ ಬಂದಿರುತ್ತೆ ಆಗ ನಾನೇ ಒಂದು ಕೋಟಿ ರೂಪಾಯಿ ನೀಡುತ್ತೇನೆ ಮತ್ತು ನಾನೇ ಉದ್ಘಾಟನೆ ಕೂಡಾ ಮಾಡುತ್ತೇನೆ ಎಂದು ಮುಂದಿನ ಸಿಎಂ ನಾನೇ ಎಂದು ಪರೋಕ್ಷವಾಗಿ ಹೇಳಿಕೊಂಡರು.
ಇನ್ನು ಮುಂದುವರೆದು ಮಾತನಾಡಿದ ಅವರು, ಸಮಾಜದಲ್ಲಿ ಮಾನವೀಯ ಮೌಲ್ಯಗಳು ಹಾಳಾಗುತ್ತಿವೆ. ಕಾಯಕವೇ ದೇವರು ಎಂಬ ಸಂದೇಶ ಸಾರಿದ ಬಸವಣ್ಣ, ಅವರ ತತ್ವಗಳು ನಿಜ ಜೀವನದಲ್ಲಿ ಅಳವಡಿಕೆಯಾಗಬೇಕು. ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಭಾವನಾತ್ಮಕ ಸಂಬಂಧಗಳಿಗೆ ಬೆಲೆ ಕೊಡಬೇಕು. ಬಸವಣ್ಣನವರು ಆ ಕಾಲದಲ್ಲೇ ಸಮಾನತೆ ಸಂದೇಶ ಸಾರಿದ್ದರು. ಸರ್ವಜನಾಂಗದ ಶಾಂತಿಯ ತೋಟವಾಗಿ ನಾವೆಲ್ಲ ಬಾಳಬೇಕು. ಅನ್ನದಾನಿ ಕ್ಷೇತ್ರದ ಸಮಸ್ಯೆಗಳಿಗೆ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಅನ್ನದಾನಿ ಕಾರ್ಯಕ್ಕೆ ನನ್ನ ಮೆಚ್ಚುಗೆ ಇದೆ. ನಮ್ಮ ಮನೆ ಹುಡುಗ ಅಂತಾ ನಾನು ಹತ್ತಿರದಿಂದ ಆತನನ್ನ ನೋಡಿದ್ದೇನೆ ಎಂದು ಹೇಳಿದರು.
ಮುಂದುವರೆದು ಮಾತನಾಡದ ಅವರು, ಮೈಸೂರಿನಲ್ಲಿ ಗುಂಬಜ್ ಮಾದರಿ ಬಸ್ ಶೆಲ್ಟರ್ ನಿರ್ಮಾಣ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದು ಗುಂಬಜ್ ಇದೆಯೋ, ಗೋಪುರ ಇದೆಯೋ ಅನ್ನೋದು ಮುಖ್ಯವಲ್ಲ. ಆದರೆ ನೆರಳು ನೀಡುವ ಕೆಲಸ ಆಗುತ್ತಿದೆಯಾ ಎಂಬುದು ಮುಖ್ಯ. ಬಸ್ ನಿಲ್ದಾಣ ತೆರವು ಮಾಡಬೇಕು ಅನ್ನೋದು ಮೂರ್ಖರ ಹೇಳಿಕೆ. ಪ್ರತಾಪ್ ಸಿಂಹಗೆ ಕಟ್ಟಿ ಅಭ್ಯಾಸವಿಲ್ಲ, ಅವರಿಗೇನಿದ್ದರೂ ಕೆಡವಿ ಅಭ್ಯಾಸ. ಆ ಪಕ್ಷದ ಶಾಸಕರೇ ಸಂಸದರಿಂದ ನೋವು ಅನುಭವಿಸುತ್ತಿದ್ದಾರೆ. ಇನ್ನು ಮತ ಹಾಕಿದ ಮತದಾರರ ಕತೆ ಏನೋ ಗೊತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ರು.