ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡು ನಂತರ ಮಾತನಾಡಿ, ಎಎಪಿ ಕರ್ನಾಟಕದಲ್ಲಿ ಬೆಳೆಯುತ್ತಿಲ್ಲ. ಅವರ ಕಾರ್ಯವೈಖರಿ ಶೈಲಿಯಿಂದ ಅದು ಸಾಧ್ಯವಾಗುತ್ತಿಲ್ಲ. ಈಗ ನಾನು ಸನಾತನ ಧರ್ಮದ ಪಕ್ಷ, ರಾಷ್ಟ್ರೀಯತೆಯನ್ನ ಮೈಗೂಡಿಸಿಕೊಂಡಿರುವ ಬಿಜೆಪಿಗೆ ಸೇರಿದ್ದೇನೆ. ಬಾಲ್ಯದಿಂದಲೂ ಸನಾತನ ಧರ್ಮ, ರಾಷ್ಟ್ರೀಯತೆಗೆ ನಾನು ಬದ್ಧವಾಗಿದ್ದೇನೆ. ಹಾಗಾಗಿ ನಾನು ಬಿಜೆಪಿ ಸೇರ್ಪಡೆ ಆಗಿದ್ದೇನೆ ಎಂದು ತಿಳಿಸಿದರು.
ಎಲ್ಲೆಲ್ಲಿ ನನ್ನ ಅವಶ್ಯಕತೆ ಇದೆ, ಅಲ್ಲಿ ನಾನು ತೊಡಗಿಸಿಕೊಂಡು ಕೆಲಸ ಮಾಡುತ್ತೇನೆ. ಭಾರತ ಸಮೃದ್ಧವಾಗಿ ಗಟ್ಟಿಯಾಗಬೇಕು. ಬಿಜೆಪಿಯಿಂದ ಮಾತ್ರ ಅದು ಸಾಧ್ಯ ಎಂದರು. ಇಲ್ಲಿ ಅತ್ಯಂತ ಅನುಭವಿ ರಾಜಕಾರಣಿಗಳು ಇದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಹೋಗ್ತೀನಿ ಎಂದು ಹೇಳಿದರು.
ಬಿಜೆಪಿ ಸೇರ್ಪಡೆಗೆ ಮುನ್ನ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಪದ್ಮನಾಭನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು.
ಇನ್ನು ಇದೀಗ ಅಧಿಕೃತವಾಗಿ ಭಾಸ್ಕರ್ ರಾವ್ ಕಮಲ ಪಕ್ಷಕ್ಕೆ ಸೇರಿದ್ದು, ಮುಂದೆ ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಭಾಸ್ಕರ್ ರಾವ್ ಜೊತೆ ಅವರ ಬೆಂಬಲಿಗರು ಬಿಜೆಪಿ ಸೇರಿದರು.