ಹಾವೇರಿ : ಕಾಂಗ್ರೆಸ್ ನ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಕಾಂಗ್ರೆಸ್ ತೊರೆದು, ಏಪ್ರಿಲ್ 7 ರಂದು ಜೆಡಿಎಸ್‌ಗೆ ಸೇರ್ಪಡೆಯಾಗಲಿದ್ದಾರೆ. ಈ ಕುರಿತು ಸ್ವತಃ ಅವರೇ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಿಂದ ನನಗೆ ದ್ರೋಹ ಆಗಿದ್ದಕ್ಕೆ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ರೈತರ ಪರವಾಗಿರುವ ಜಾತ್ಯಾತೀತ ಜನತಾದಳ ಪಕ್ಷ ಸೇರ್ಪಡೆಗೊಳ್ಳಲು ಅಂತಿಮವಾಗಿ ನಿರ್ಧರಿಸಿದ್ದೇನೆ. ಏಪ್ರಿಲ್7 ರಂದು ಜೆಡಿಎಸ್‌ನ ಪಂಚರತ್ನ ಯಾತ್ರೆ ಹಾನಗಲ್ಲಿಗೆ ಆಗಮಿಸುತ್ತಿದೆ. ಅಂದು ತಾಲೂಕಿನ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಜೆಡಿಎಸ್ ಸೇರ್ಪಡೆಯಾಗುತ್ತೇನೆ ಎಂದರು.
ಕಾಂಗ್ರೆಸ್ ಹೈಕಮಾಂಡ್ ನನಗೆ ಮಾಡಿದ ದ್ರೋಹ ಪ್ರತಿಭಟಿಸಿ ಪಕ್ಷ ತೊರೆಯುವ ನಿರ್ಧಾರ ಕೈಗೊಂಡಿದ್ದೇನೆ. ಇನ್ನೆಂದೂ ಕಾಂಗ್ರೆಸ್ ಕಡೆ ತಲೆ ಹಾಕುವುದಿಲ್ಲ, ಕಾಂಗ್ರೆಸ್ ತೊರೆದು ರೈತರ, ಜನಪರವಾದ ಜಾತ್ಯಾತೀತ ಜನತಾದಳ ಪಕ್ಷ ಸೇರಲು ತೀರ್ಮಾನಿಸಿದ್ದೇನೆ, ಕಳೆದ 50 ವರ್ಷಗಳಿಂದ ಕಾಂಗ್ರೆಸ್ ನನಗೆ ತಾಯಿಯಾಗಿತ್ತು, ಅನಿವಾರ್ಯವಾಗಿ ಕಾಂಗ್ರೆಸ್ ತೊರೆಯುತ್ತಿದ್ದೇನೆ ಎಂದು ತಿಳಿಸಿದರು.
ಮನೋಹರ ತಹಸೀಲ್ದಾರ್ ಶಾಸಕರಾಗಿ, ಸಚಿವರಾಗಿ ಮತ್ತು ವಿಧಾನಸಭೆ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ.