ಬೆಂಗಳೂರು: ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ಹೊನ್ನಾಳಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ನೋಟಿಸ್ ನೀಡಿದರೂ ಅವರು ತಲೆಕೆಡಿಸಿಕೊಂಡಿಲ್ಲ. ನೋಟಿಸ್‌ಗೆ ಉತ್ತರವನ್ನೂ ಕೊಡದ ಅವರು, ಪಕ್ಷದ ನಾಯಕತ್ವದ ವಿರುದ್ಧದ ತಮ್ಮ ಹೇಳಿಕೆ ಮುಂದುವರಿಸುವ ಮೂಲಕ ರಾಜ್ಯ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿದ್ದಾರೆ.
ಚುನಾವಣೆ ಸೋಲಿನ ಬಳಿಕ ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗೇ ಅಸಮಾಧಾನ ಹೊರಹಾಕುತ್ತಾ, ಪಕ್ಷದ ವಿರುದ್ಧವೇ ಗುಡುಗುತ್ತಿರುವ ಎಂಪಿಆರ್, ನೋಟಿಸ್ ಕೊಟ್ಟರೂ ಕ್ಯಾರೇ ಎನ್ನುತ್ತಿಲ್ಲ; ಸಂಬಂಧಪಟ್ಟವರಿಗೆ ಉತ್ತರವನ್ನೂ ನೀಡಿಲ್ಲ. ಪಕ್ಷದ ನಾಯಕತ್ವದ ವಿರುದ್ಧ ಮಾತನಾಡುತ್ತಿದ್ದ ಯತ್ನಾಳ್, ನೋಟಿಸ್ ಕೊಟ್ಟ ನಂತರ ಸುಮ್ಮನಾಗಿದ್ದಾರೆ. ಆದರೆ, ರೇಣುಕಾಚಾರ್ಯ ಮಾತ್ರ ತಮ್ಮ ಮಾತು ನಿಲ್ಲಿಸುತ್ತಿಲ್ಲ.
ಇದನ್ನೂ ಓದಿ; ಚಂದ್ರನ ಮೇಲೆ ಕೆಲಸ ಮುಗಿಸಿ ನಿದ್ರೆಗೆ ಜಾರಿದ ‘ಪ್ರಗ್ಯಾನ್’ ರೋವರ್, ‘ವಿಕ್ರಂ’ ಲ್ಯಾಂಡರ್
ರೇಣುಕಾಚಾರ್ಯ ಅವರ ವರ್ತನೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸಂತೋಷ್ ನಾಯಕತ್ವದ ವಿರುದ್ಧ ಗುಡುಗುತ್ತಾ, ಬಿಎಸ್‌ವೈ ನಾಯಕತ್ವವನ್ನು ಹೊಗಳುತ್ತಿರುವ ರೇಣುಕಾಚಾರ್ಯ ಅವರನ್ನು ಕಟ್ಟಿಹಾಕಲು, ಯಡಿಯೂರಪ್ಪ ಅವರಿಗೆ ಮೊರೆ ಹೋಗಲು ನಾಯಕರು ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪಕ್ಷದ ವಿರುದ್ಧ ಮಾತನಾಡಿದಂತೆ ಬಿಎಸ್‌ವೈ ಅವರಿಂದಲೇ ರೇಣುಕಾಚಾರ್ಯ ಅವರಿಗೆ ಹೇಳಿಸೋಣ ಎಂಬ ತೀರ್ಮಾನಕ್ಕೆ ಬರಲಾಗಿದ್ದು, ಹೈಕಮಾಂಡ್ ವರಿಷ್ಠ ನಾಯಕರಿಗೂ ಈ ವಿಚಾರ ತಲುಪಿಸಲು ಚಿಂತನೆ ನಡೆದಿದೆ. ದೊಡ್ಡವರಿಂದಲೇ ರೇಣುಕಾಚಾರ್ಯ ಅವರಿಗೆ ಬುದ್ದಿ ಹೇಳಿಸಲು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ವಲಸೆ ಶಾಸಕರೂ ಸೇರಿದಂತೆ ಸುಮಾರು 15-20 ಜನರಿಗೆ ಈಗಾಗಲೇ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಕೊಟ್ಟಿದೆ. ಅವರೆಲ್ಲೂ ಉತ್ತರ ನೀಡಿದ್ದಾರೆ. ಆದರೆ, ರೇಣುಕಾಚಾರ್ಯ ಮಾತ್ರ ಇನ್ನೂ ಉತ್ತರ ಕೊಟ್ಟಿಲ್ಲ; ನೋಟಿಸ್ ಸಿಕ್ಕ ನಂತರ ಮಾತನಾಡುವುದನ್ನೂ ನಿಲ್ಲಿಸಿಲ್ಲ. ಶಿಸ್ತುಸಮಿತಿ ಕೂಡ ಏನು ಮಾಡಲಾಗದ ಸ್ಥಿತಿಯಲ್ಲಿದ್ದು, ಎಂ.ಪಿ. ರೇಣುಕಾರ್ಯ ಪಕ್ಷಕ್ಕೆ ಬಿಸಿ ತುಪ್ಪವಾಗಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.