Sunday, September 24, 2023
spot_img
- Advertisement -spot_img

‘ಸಿಎಂ ಸಿದ್ದರಾಮಯ್ಯ ಆಧುನಿಕ ಚಾರ್ವಾಕ’

ಮೈಸೂರು : ಸಿಎಂ ಸಿದ್ದರಾಮಯ್ಯ ಆಧುನಿಕ ಚಾರ್ವಾಕ, ಸಾಲ ಮಾಡಿಯಾದರೂ ತುಪ್ಪ ತಿನ್ನು ಅನ್ನುವುದು ಅವರ ನೀತಿ, ಚಾರ್ವಾಕನಿಗೆ ಮುಂದಿನ ಜನ್ಮದ ಬಗ್ಗೆ ನಂಬಿಕೆ ಇರಲಿಲ್ಲ. ಅದೇ ರೀತಿ ಇವರೂ ಸಹ ತಮ್ಮ ವೈಫಲ್ಯಗಳನ್ನು ಮರೆಮಾಚಲು, ವಿವಾದಗಳನ್ನು ಕೆದಕಲು ಹೊರಟಿದ್ದಾರೆ ಎಂದು ಮಾಜಿ ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ನಗರದ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದಲ್ಲೇ ಅಸಮಾಧಾನ ಇದೆ. ಅವರಲ್ಲಿಯ ಹಿರಿಯ ಶಾಸಕರು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಎಸ್‌ ಟಿ ಸೋಮಶೇಖರ್ ವಿಚಾರದಲ್ಲಿ ನಾನು ಏನನ್ನೂ ಮಾತನಾಡುವುದಿಲ್ಲ ಎಂದರು.

ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳಿಗೆ ‘ಬಸವಾದಿ ಶರಣರು’ ಪ್ರೇರಣೆ : ಸಿಎಂ ಸಿದ್ದರಾಮಯ್ಯ

ನಾನು ಏನಾದರೂ ಹೇಳಿದರೆ ಪಕ್ಷದಿಂದ ಕಳುಹಿಸಲು ಸಿದ್ಧವಾಗಿದ್ದಾರೆ ಎಂದು ನನ್ನ ಬಗ್ಗೆ ಭಾವಿಸಿಕೊಳ್ಳುತ್ತಾರೆ. ಆದ್ದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಈ ಬಗ್ಗೆ ಅವರೊಂದಿಗೆ ಖುದ್ದಾಗಿ ಮಾತನಾಡುತ್ತೇನೆ ಎಂದು ಹೇಳಿದರು.

ವಿಪಕ್ಷ ನಾಯಕರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಳ್ಳುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿ, ಸಿದ್ದರಾಮಯ್ಯ ಪ್ರಳಯವಾದರೂ ಬಿಟ್ಟು ಹೋದ ಯಾರೊಬ್ಬರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದಿದ್ದರು. ಆದರೆ ಈಗ ಬಾಗಿಲು ತೆರೆದಿದೆ ಎನ್ನುತ್ತಿದ್ದಾರೆ. ಬಾಗಿಲು ತೆರೆದ ಮೇಲೆ ಒಳಗೂ ಹೋಗಬಹುದು, ಹೊರಗೆ ಬರಲೂ ಬಹುದು. ಹೋಗುವವರನ್ನು ಕಟ್ಟಿ ಹಾಕಲು ಅವರೇನು ದನಗಳಾ ಎಂದು ಪ್ರಶ್ನಿಸಿದರು.

ಈಗ ಅವರಲ್ಲಿ ಇರುವವರನ್ನೇ ತಡೆಯಲು ಆಗುತ್ತಿಲ್ಲ. ನಮ್ಮ 66 ಜನ ಶಾಸಕರು ನಿಷ್ಠಾವಂತರು ಎಂದು ಭಾವಿಸಿದ್ದೇವೆ. ನನಗೆ ದೇಶ ಬಿಟ್ಟರೆ ಪಕ್ಷವೇ ಹೆಚ್ಚು, ನಾನು ಬೆದರಿಕೆಗೆ ಹೆದರುವವನಲ್ಲ ಎಂದು ಹೇಳಿದ ಅವರು, ಕಾಂಗ್ರೆಸ್ ಸರ್ಕಾರ ಬರದಲ್ಲೂ ಸಂಭ್ರಮಿಸಲು ಹೊರಟಿದೆ. ನಮ್ಮ ನೀರು ನಮ್ಮ ಹಕ್ಕು ಎಂಬ ಹೋರಾಟವನ್ನು ಡಿಎಂಕೆಗೆ ಒತ್ತೆ ಇಟ್ಟು, ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಎಂದು ಹರಿಹಾಯ್ದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ತಂದ ಹಲವಾರು ರೈತ ಪರ, ಬಡವರಪರ, ಜನಪ್ರಿಯ ಮತ್ತು ಜನಸ್ನೇಹಿ ಯೋಜನೆಗಳನ್ನು ರದ್ದು ಪಡಿಸಿ ಜನರ ಬದುಕಿಗೆ ಉಚಿತ ಗ್ಯಾರೆಂಟಿಗಳ ಹೆಸರಿನ ಮಂಕುಬೂದಿ ಎರಚಿದ್ದಷ್ಟೇ ಕಾಂಗ್ರೆಸ್ ಸಾಧನೆ ಎಂದು ಟೀಕಿಸಿದರು.

ಭ್ರಷ್ಟಾಚಾರ, 80% ಕಮಿಷನ್, ಸ್ವಜನ ಪಕ್ಷಪಾತ, ಅಘೋಷಿತ ವಿದ್ಯುತ್ ಕಡಿತ, ವಾಕ್ ಸ್ವಾತಂತ್ರ್ಯ ದಮನ, ರಾಜ್ಯದ ರೈತರನ್ನು ಕಡೆಗಣಿಸಿ ತಮಿಳುನಾಡಿಗೆ ಕೆಆರ್‌ಎಸ್ ನೀರು, ಕಿಸಾನ್ ರೈತ ನಿಧಿ ರದ್ದು ಮುಂತಾದ ಜನ ವಿರೋಧಿ ರೈತವಿರೋಧಿ ಕಾರ್ಯಗಳಷ್ಟೇ ಈ ಸರ್ಕಾರದ ನೂರುದಿನದ ಸಾಧನೆ ಎಂದು ವ್ಯಂಗ್ಯವಾಡಿದರು.

ಬರದ ಸಂಕಷ್ಟದಲ್ಲೂ ರೈತರ ನೆರವಿಗೆ ಯಾವುದೇ ಯೋಜನೆ ಇಲ್ಲ. CWMA (ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ) ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ವಿಚಾರ ಹೇಳುವುದಕ್ಕಿಂತ ಮುಂಚೆಯೇ ರಾಜ್ಯ ಸರ್ಕಾರ ನೀರು ಬಿಟ್ಟಿದೆ ಎಂದು ಆರೋಪಿಸಿದರು.

‘ಇಂಡಿಯಾ’ ಕೂಟದಲ್ಲಿ ಒಡಕು ಮೂಡಬಾರದು ಎಂಬ ಕಾರಣಕ್ಕೆ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಮುಂದೆ ನೀರು ಬಿಡುವ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡುವ ನಿರ್ಣಯ ಮಾಡಿದರೆ ಆಗ ಸರ್ಕಾರದ ಜೊತೆಗೆ ನಾವು ಇರುತ್ತೇವೆ ಎಂದು ತಿಳಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles