Sunday, October 1, 2023
spot_img
- Advertisement -spot_img

ಕೋವಿಡ್‌ ಅಕ್ರಮದ ತನಿಖೆ ರಾಜಕೀಯ ಪ್ರೇರಿತ: ಕೆ.ಸುಧಾಕರ್

ಬೆಂಗಳೂರು: ಕೋವಿಡ್‌ ಅವಧಿಯಲ್ಲಿ ಅಕ್ರಮ ಆಗಿದೆ ಎಂದು ಆರೋಪಿಸಿ ಈಗ ತನಿಖೆಗೆ ಆಯೋಗ ರಚನೆ ಮಾಡಿರುವುದು ರಾಜಕೀಯ ಪ್ರೇರಿತ ಎಂದು ಮಾಜಿ ಸಚಿವ ಕೆ.ಸುಧಾಕರ್‌ ಕಿಡಿಕಾರಿದರು.

ಕೋವಿಡ್ ಅಕ್ರಮದ ತನಿಖೆಗೆ ಆಯೋಗ ರಚನೆ ಮಾಡಿದ ವಿಚಾರವಾಗಿ ಮಾತನಾಡಿದ ಸುಧಾಕರ್‌, ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ ಮಾಡಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕೋವಿಡ್ ನಿಯಂತ್ರಿಸಲು ಸಫಲ ಆಗಿತ್ತು. ಈಗ ಅಕ್ರಮ ಆಗಿದೆ ಅಂತಾ ಆರೋಪ‌ ಮಾಡಿ ತನಿಖೆಗೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್‌​ ವಿಚಾರದಲ್ಲಿ ಸರ್ಕಾರಕ್ಕೆ ಕಾಂಗ್ರೆಸ್ಸಿಗರು ಸಹಕಾರ ಕೊಡಲಿಲ್ಲ. ಕೋವಿಡ್ ಇದ್ದಾಗ ಕಾಂಗ್ರೆಸ್​​ನವರಿಗೆ ಸಾಮಾಜಿಕ‌ ಜವಾಬ್ದಾರಿ ಇರಲಿಲ್ಲ. ಆಗ ಪಾದಯಾತ್ರೆ ಮಾಡಿದವರ ವಿರುದ್ಧ ಪ್ರಕರಣ ಹಾಕಲಾಗಿತ್ತು. ಇವರ ಸರ್ಕಾರ ಬಂದ ನಂತರ ಆ ಕೇಸ್​​ಗಳನ್ನೆಲ್ಲ ವಾಪಸ್‌ ಪಡೆದಿದ್ದಾರೆ. ತ‌ನಿಖೆ ನಡೆಸುವ ಉದ್ದೇಶ ಇದ್ದಿದ್ದರೆ, ಲೋಕಾಯುಕ್ತಕ್ಕೆ ಕೊಡಬಹುದಿತ್ತು ಎಂದರು.

ಇನ್ನು ಇತ್ತೀಚೆಗಷ್ಟೇ ಕೋವಿಡ್‌ ಹೆಸರಿನಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕುರಿತು ತನಿಖೆ ನಡೆಸಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಈ ಎರಡು ಇಲಾಖೆಗಳು ಕೋವಿಡ್‌ ನಿಯಂತ್ರಣಕ್ಕಾಗಿ ಔಷಧ ಹಾಗೂ ಉಪಕರಣಗಳನ್ನು ಖರೀದಿಸಿರುವ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡಿರುವ ವರದಿಯಲ್ಲಿ ಗಂಭೀರವಾದ ಆರೋಪಗಳ ಬಗ್ಗೆ ವಿವರಿಸಲಾಗಿದೆ. ಹೀಗಾಗಿ, ಈ ಪ್ರಕರಣವನ್ನು ತನಿಖೆ ನಡೆಸಲು ಆಯೋಗ ರಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: ಕೋವಿಡ್ ಅಕ್ರಮ ತನಿಖೆಗೆ ಆಯೋಗ ರಚನೆ

ಮೂರು ತಿಂಗಳೊಳಗೆ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಹಾಗೂ ಸಮಗ್ರ ಮಾಹಿತಿ, ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗಳು ಸಲ್ಲಿಸಬೇಕು. ಆಯೋಗದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಆಗುವಂತೆ ಆಯೋಗದ ನ್ಯಾಯಮೂರ್ತಿ, ಕಾರ್ಯದರ್ಶಿ ಹಾಗೂ ಅಧಿಕಾರಿ, ಸಿಬ್ಬಂದಿಗೆ ವಾಹನ, ಪೀಠೋಪಕರಣ ಮತ್ತಿತರ ಸೌಲಭ್ಯವನ್ನು ಆರೋಗ್ಯ ಇಲಾಖೆಯ ಆಯುಕ್ತರು ಒದಗಿಸಬೇಕು ಎಂದು ಸರ್ಕಾರ ಸೂಚಿಸಿದೆ.

ಕೋವಿಡ್ ಸಂದರ್ಭದಲ್ಲಿ ಸುಮಾರು 2 ಸಾವಿರ ಕೋಟಿ ರೂಪಾಯಿಗಳಷ್ಟು ಭಾರಿ ಅಕ್ರಮ ನಡೆದಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ವಿಧಾನಸಭೆಯಲ್ಲಿ ಆರೋಪ ಮಾಡಿದ್ದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles