Sunday, October 1, 2023
spot_img
- Advertisement -spot_img

‘ಸಿದ್ದರಾಮಯ್ಯ ಪಕ್ಷಾಂತರ ಪ್ರವೀಣ’

ಬಾಗಲಕೋಟೆ : ಸಿದ್ದರಾಮಯ್ಯ ಪಕ್ಷಾಂತರ ಮಾಡುವ ಮೂಲಕ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದವರು, ಅವರು ಪಕ್ಷಾಂತರದ ಪ್ರವೀಣರಾಗಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ಪಕ್ಷಾಂತರದಿಂದಲೇ ರಾಜಕಾರಣ ಮಾಡುತ್ತಿರುವ ಅವರಿಗೆ ಆ ಬಗ್ಗೆ ಮಾತನಾಡುವ ಅಧಿಕಾರವೇ ಇಲ್ಲ. ಕಾಂಗ್ರೆಸ್‌ ಆಡಳಿತ ಸರಿಯಿಲ್ಲ ಎಂದು 17ಜನ ಶಾಸಕರು ಬಿಜೆಪಿಗೆ ಬಂದ ಬಳಿಕ ”ಸೂರ್ಯ,ಚಂದ್ರ ಇರುವುದು ಎಷ್ಟು ಸತ್ಯವೋ, ಅವರನ್ನು ಮರಳಿ ಕಾಂಗ್ರೆಸ್ ಪಕ್ಷಕ್ಕೆ ತರುವುದಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ” ಎಂದು ಆಪರೇಷನ್ ಹಸ್ತಕ್ಕೆ ಟಾಂಗ್ ನೀಡಿದರು.

ಇದನ್ನೂ ಓದಿ : 18 ಶಾಸಕರು ಕಾಂಗ್ರೆಸ್‌ಗೆ ಬರಬಹುದು: ಕೋನರೆಡ್ಡಿ

ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗೆ 23ಸ್ಥಾನಗಳು ಬರುತ್ತವೆ ಎಂಬುದನ್ನು ಕೇಳಿ ಅವರು ನಿದ್ದೆ ಮಾಡುತ್ತಿಲ್ಲ. ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದರೆ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ, ನಾವು ಕರೆಯದೆ ಇದ್ದರೂ ಅವರೇ(ಕಾಂಗ್ರೆಸ್ ನಾಯಕರು) ದಿಕ್ಕಾಪಾಲಾಗಿ ಹೋಗುತ್ತಾರೆ. ಅಲ್ಲದೆ, ಅವರ ಪಕ್ಷವೂ ಉಳಿಯುವುದಿಲ್ಲ ಎಂದು ಟೀಕಿಸಿದರು.

ಮೂರು ತಿಂಗಳು ಪೊರೈಸಿರುವ ಸರ್ಕಾರವನ್ನು ಮಗುವಿಗೆ ಹೋಲಿಸಿ ಮಾತನಾಡಿದ ಮಾಜಿ ಸಚಿವ, ಮಗುವಿಗೆ ಈಗ ಮೂರು ತಿಂಗಳು, ಇನ್ನೊಂದು ಮೂರು ತಿಂಗಳಾಗಲಿ. ಲೋಕಸಭಾ ಚುನಾವಣೆ ಮುಗಿಯಲಿ ಆಗ ಇವರ ಪರಿಸ್ಥಿತಿ ಗೊತ್ತಾಗುತ್ತದೆ ಎಂದರು.

ಸರ್ಕಾರದ ವಿರುದ್ಧ ವಿಪಕ್ಷಗಳು ಗುತ್ತಿಗೆದಾರರನ್ನು ಎತ್ತಿಕಟ್ಟಿದ್ದಾರೆಂಬ ಡಿಸಿಎಂ ಡಿಕೆಶಿ ಆರೋಪಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಡಿಕೆಶಿ ಡಿಸಿಎಂ ಆದ ದಿನದಂದಲೂ ಸಿಎಂ ಅವರಾ? ಅಥವಾ, ಸಿದ್ದರಾಮಯ್ಯನವರೋ? ಎನ್ನುವ ರೀತಿ ಮಾತನಾಡುತ್ತಿದ್ದಾರೆ. ಎಲ್ಲ ಇಲಾಖೆಗಳು ನಿಮ್ಮ ಕೈಯಲ್ಲೆ ಇವೆ ತನಿಖೆ ಮಾಡಿಸಿ ಎಂದು ಹೇಳಿದರು.

ಅಲ್ಲದೆ ಯಾವುದಾದರೊಂದು ಇಲಾಖೆಗೆ ಒಬ್ಬರು ನ್ಯಾಯಾಧೀಶರನ್ನು ಅಧ್ಯಕ್ಷರನ್ನಾಗಿ ನೇಮಿಸಿ, ಅವರಿಗೆ 15 ದಿನ ಸಮಯ ನೀಡುವುದರ ಜೊತೆಗೆ ಒಂದು ಕೇಸ್ ಕೊಡಿ. ಕೇವಲ ತನಿಖೆ ಎನ್ನುವ ನೀವು, ನಿಜಕ್ಕೂ ಕಳಕಳಿ ಇದ್ದರೆ ನಿಮ್ಮ ಕಾಲದಿಂದ ಇಲ್ಲಿಯವರೆಗೂ ಅವರಿಂದ ತನಿಖೆ ಮಾಡಿಸಿ ಎಂದು ಸವಾಲು ಹಾಕಿದರು.

ಡಿಕೆಶಿಯವರು ಎಲ್ಲ ಸರ್ಕಾರಗಳ ಹಗರಣ ತನಿಖೆ ಮಾಡಿಸುತ್ತೇವೆ ಎಂಬ ಬ್ಲ್ಯಾಕ್ ಮೇಲ್ ತಂತ್ರದ ರಾಜಕಾರಣವನ್ನು ಬಿಜೆಪಿ ನಂಬುವುದಿಲ್ಲ. ಡಿಕೆಶಿ ಯಾವ ಜೈಲಿನಿಂದ ಹೊರಬಂದವರು? ಯಾವ ಬೇಲ್ ಮೇಲೆ ಬಂದವರು? ಯಾವ ಜೈಲಿನಲ್ಲಿ ಇದ್ದವರು? ಎಂದ ಅವರು, ಈ ರೀತಿಯ ಬ್ಲ್ಯಾಕ್ ಮೇಲ್ ತಂತ್ರವನ್ನು ಮಾಡಿದರೆ ಜನರು ನಂಬುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles