ಬಾಗಲಕೋಟೆ : ಕಳೆದ ಬಾರಿ ರಾಜಕೀಯ ಅಲ್ಲೋಲ, ಕಲ್ಲೋಲ ಆಗುತ್ತದೆ ಎಂಬ ಭಾವನೆಗಳನ್ನು ಇದೇ ಕಾಂಗ್ರೆಸ್‌ನವರು ತಂದಿದ್ದರು. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ, ಬಿಜೆಪಿ ಒಂದು ಶೀಟ್ ಗೆಲ್ಲಲ್ಲ, ಎರಡು ಶೀಟ್ ಸಹ ಗೆಲ್ಲಲ್ಲ ಎಂದು ಹೇಳಿದ್ದರು. ಈಗಲೂ ಅದೇ ವಾತಾವರಣ ಇದೆ, ಆದರೆ ಯಾರೋ ಒಂದಿಬ್ಬರು ಅಲ್ಲಿ, ಇಲ್ಲಿ ಹೋದರು ಎಂದ ಮಾತ್ರಕ್ಕೆ ಪಕ್ಷಕ್ಕೆ ಯಾವುದೇ ರೀತಿಯ ಪರಿಣಾಮ ಬೀರಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ರಾಜಕೀಯ ನಿಂತ ನೀರಲ್ಲ, ಯಾರೋ ಒಂದಿಬ್ಬರು ಬರುತ್ತಾರೆ, ಹೋಗುತ್ತಾರೆ ಎಂದರೆ, ಇಡೀ ದೇಶದಲ್ಲಿಯೇ ಪರಿವರ್ತನೆ ಆಗುತ್ತದೆ ಎಂಬ ಭಾವನೆ ಇಲ್ಲ. ವಿಶೇಷ ಎಂದರೆ ಲಕ್ಷಾಂತರ ಜನ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ಉದ್ದೇಶ ದೇಶ ಉಳಿಬೇಕು ಎಂಬುದಾಗಿದೆ. ಈ ವಿಶ್ವವನ್ನೆ ಮುನ್ನಡೆಸುವ ನಾಯಕ ಎಂದರೆ ಅದು ಮೋದಿ. ದೇಶಭಕ್ತಿ ಯಾವ ಪಕ್ಷದಲ್ಲಿದೆ, ಎಂದು ದೇಶದ ಜನ ಯೋಚನೆ ಮಾಡುತ್ತಾರೆ. ಹೀಗಾಗಿ ಯಾವುದೇ ಅಲ್ಲೋಲ ಕಲ್ಲೋಲ ಆಗುವುದಿಲ್ಲ ಎಂದರು.
ಸತ್ತು ಹೋಗಿರುವ ಹೆಣವನ್ನು ಹೊರಗೆ ಯಾಕೆ ತೆಗಿತಿದ್ದೀರಿ…?
ವಿದೇಶದಲ್ಲಿರುವ ಭಾರತದ ಕಪ್ಪು ಹಣವನ್ನು ತರುವುದಾಗಿ ಘೋಷಿಸಿ ದೇಶಕ್ಕೆ ಆ ಹಣವನ್ನು ತರಲು ಬಿಜೆಪಿ ವಿಫಲವಾಗಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಈಶ್ವರಪ್ಪ ಕಪ್ಪು ಹಣದ ವಿಷಯವನ್ನು ಹೆಣಕ್ಕೆ ಹೋಲಿಸಿ ಮಾತನಾಡಿದ್ದಾರೆ.
ಸತ್ತು ಹೋಗಿರುವ ಹೆಣ (ವಿಷಯ) ಹೊರಗೆ ತೆಗೆತಿದ್ದೀರಿ, ಹೊಸ (ಹೊಸ ವಿಷಯ) ಕೊಲೆಯಾಗಿದ್ದರೆ ಅದರ ಬಗ್ಗೆ ಹೇಳಿ ಎಂದು ವ್ಯಂಗ್ಯವಾಡಿದ್ದಾರೆ. ಹಳೆಯ ವಿಷಯವನ್ನು ಕೆದಕುವುದು ಬೇಡ ಹೊಸದೇನಾದರೂ ಇದ್ದರೆ ಹೇಳಿ ಎಂದಿದ್ದಾರೆ.
ರಾಜ್ಯ ಸರ್ಕಾರದಿಂದ ಆರೋಗ್ಯ ಗ್ಯಾರಂಟಿ ನೀಡುವ ವಿಚಾರದ ಬಗ್ಗೆ ಮಾತನಾಡಿ, ಟಿವಿಗಳಿಗೂ ಹಬ್ಬ, ಜನರಿಗೂ ಕೇಳೋಕೆ ಹಬ್ಬ, ನಾಲ್ಕೈದು ಅಲ್ಲ, ಇಪ್ಪತ್ತರವರೆಗೂ ಏನು ಬೇಕಾದರೂ ಗ್ಯಾರಂಟಿ ಕೊಡಲು ಅವಕಾಶ ಇದೆ. ಆದರೆ ಜನ ನಂಬಬೇಕಲ್ವ? ಒಂದು ಸಾರಿ ನಂಬಿದ್ದಾರೆ, ಎಷ್ಟರ ಮಟ್ಟಿಗೆ ಬುದ್ಧಿವಂತರಾಗಬೇಕೋ ಅಷ್ಟು ಆಗಿದ್ದಾರೆ ಎಂದರು.
ಕಳೆದ ಬಾರಿ ರಾಜ್ಯದಲ್ಲಿ ಬಿಜೆಪಿಗೆ 25 ಸ್ಥಾನಗಳು ಬಂದಿದ್ದವು. ಈ ಬಾರಿಯೂ 25 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲತ್ತೇವೆ. ಅದೇ ರೀತಿಯ ಪಲಿತಾಂಶ ಬರುತ್ತದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.