ಬೆಂಗಳೂರು : ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿಯ ಸದಸ್ಯರನ್ನಾಗಿ ಮಾಜಿ ಸಚಿವ ಹಾಗೂ ಹಳಿಯಾಳದ ಶಾಸಕ ಆರ್.ವಿ. ದೇಶಪಾಂಡೆಯವರನ್ನು ನೇಮಕ ಮಾಡಲಾಗಿದೆ.
ಈ ಬಗ್ಗೆ ನೂತನ ರಚನೆಯಾಗಿರುವ 24 ಸದಸ್ಯರಿರುವ ಆಡಳಿತ ಮಂಡಳಿ ಸದಸ್ಯರಲ್ಲಿ ಆರ್.ವಿ.ದೇಶಪಾಂಡೆ ಸೇರಿದಂತೆ ರಾಜ್ಯದಿಂದ ಇಬ್ಬರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಈ ಹಿಂದೆಯೂ ಟಿಟಿಡಿಯ ಸದಸ್ಯರಾಗಿದ್ದ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ಮುಂದುವರಿಸಲಾಗಿದೆ.
ಇದನ್ನೂ ಓದಿ : ಇಂದಿನಿಂದ ಮೂರು ದಿನ ಸಿಎಂ ತವರು ಜಿಲ್ಲೆ ಪ್ರವಾಸ
ಆಡಳಿತ ಮಂಡಳಿಯ ನೂತನ ಪಟ್ಟಿಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್. ಜಗನ್ ಮೋಹನ್ ರೆಡ್ಡಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ.
ಟಿಟಿಡಿಗೆ ನಂದಿನಿ ತುಪ್ಪ ಇನ್ನಾದರೂ ಪೊರೈಕೆಯಾಗಬಹುದೆ..?
ಸುಮಾರು 50 ವರ್ಷಗಳ ನಂತರ ತಿರುಪತಿ ತಿರುಮಲ ಟ್ರಸ್ಟ್ (ಟಿಟಿಡಿ) ತನ್ನ ಪ್ರಸಿದ್ಧ ಲಡ್ಡುಗಳನ್ನು ತಯಾರಿಸಲು ಕರ್ನಾಟಕ ಹಾಲು ಒಕ್ಕೂಟದಿಂದ (ಕೆಎಂಎಫ್) ತುಪ್ಪ ಖರೀದಿಯನ್ನು ಸ್ಥಗಿತಗೊಳಿಸಿದೆ.
ಕೆಎಂಎಫ್ ನೀಡಿರುವ ಬೆಲೆಯನ್ನು ಒಪ್ಪಿಕೊಳ್ಳದ ಟಿಟಿಡಿ ಮತ್ತೊಂದು ಕಂಪನಿಯೊಂದಿಗೆ ಒಪ್ಪಂದಕ್ಕೆ ಮುಂದಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. ಕೆಎಂಎಫ್ ತುಪ್ಪದಿಂದ ಲಡ್ಡುಗಳು ರುಚಿಯಾಗಿವೆ ಎಂದು ಟಿಟಿಡಿ ಹಲವು ಬಾರಿ ಹೇಳಿದ್ದರೂ ಈಗ ಅದರ ಒಪ್ಪಂದ ಮುಕ್ತಾಯವಾಗಿದೆ.
ನಂದಿನಿ ಹಾಲಿನ ತುಪ್ಪಕ್ಕೆ ಹೆಚ್ಚಿನ ಬೆಲೆಗೆ ಬೇಡಿಕೆ ಇಟ್ಟಿದ್ದೇವೆ. ಆದರೆ ಟಿಟಿಡಿ ಇ-ಪ್ರೊಕ್ಯೂರ್‌ಮೆಂಟ್ ಸೈಟ್ ಮೂಲಕ ಕಡಿಮೆ ಬೆಲೆಯನ್ನು ನಮೂದಿಸಿದ ಕಂಪನಿಯನ್ನು ಆಯ್ಕೆ ಮಾಡಿದೆ. ಗುಣಮಟ್ಟದಿಂದಾಗಿ ಕೆಎಂಎಫ್ ತುಪ್ಪ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಹೊಂದಿದೆ. ಕಡಿಮೆ ಬೆಲೆಗೆ ಬಿಡ್ ಮಾಡುವ ಕಂಪನಿಯೊಂದಿಗೆ ಅವರು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತಾರೆ ಎಂದು ನಾಯಕ್ ಮಾಹಿತಿ ನೀಡಿದ್ದರು.
ಈ ವಿಚಾರದಲ್ಲಿಯೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದ ನಾಯಕರು ಪರಸ್ಪರ ಕೆಸರೆರಚಾಟವನ್ನು ನಡೆಸಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲೆ ತುಪ್ಪದ ಪೊರೈಕೆಯನ್ನು ನಿಲ್ಲಿಸಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸರ್ಕಾರವೇ ಟಿಟಿಡಿಗೆ ಕಳುಹಿಸಲಾಗುತ್ತಿದ್ದ ತುಪ್ಪವನ್ನು ನಿಲ್ಲಿಸಿದೆ ಎಂದು ಆರೋಪಿಸಿತ್ತು.
ಆದರೆ ಆಡಳಿತ ಪಕ್ಷದ ಶಾಸಕರಾಗಿರುವ ಆರ್.ವಿ ದೇಶಪಾಂಡೆಯವರು ಟಿಟಿಡಿಯ ಸದಸ್ಯರಾಗಿ ಆಯ್ಕೆಯಾಗಿರುವದರಿಂದ ರಾಜ್ಯದ ನಂದಿನಿ ತುಪ್ಪ ತಿರುಪತಿಯ ಲಡ್ಡುಗಳಲ್ಲಿ ಬಳಕೆಯಾಗಬಹುದೆಂಬ ನಿರೀಕ್ಷೆ ಮೂಡಿಸಿದೆ.
ಬೆಲೆಯಲ್ಲಿ ಆಗುತ್ತಿರುವ ಏರಿಳಿತವನ್ನು ಸರಿದೂಗಿಸಿ ಸರ್ಕಾರಕ್ಕೆ ಯೋಗ್ಯ ಬೆಲೆ ದೊರೆಯುವಂತೆ ಆರ್ ವಿ ದೇಶಪಾಂಡೆ ಟಿಟಿಡಿಗೆ ತುಪ್ಪವನ್ನು ಪೊರೈಕೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂಬ ಆಶಾಭಾವ ಹುಟ್ಟಿಕೊಂಡಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.