ಯಾದಗಿರಿ : ರಾಜ್ಯದಲ್ಲಿ ಅವಧಿ ಮುಗಿದರೂ ಇದುವರೆಗೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಯಕನ ಆಯ್ಕೆಯಾಗದಿರುವುದು ಆಡಳಿತ ಪಕ್ಷ ಕಾಂಗ್ರೆಸ್‌ಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿದರೆ, ಇತ್ತ ಬಿಜೆಪಿ ನಾಯಕರಿಗೆ ಅದು ಕನಸಿನ ಕೂಸಿನಂತೆ ಕಾಣುತ್ತಿದೆ.
ಕಳೆದ ಕೆಲ ದಿನಗಳ ಹಿಂದೆ ನಾನೂ ಸಹ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ನನ್ನನ್ನು ಆಯ್ಕೆ ಮಾಡಿ ಎಂದು ಬೇಡಿಕೆ ಇಟ್ಟು, ಹೈಕಮಾಂಡ್ ಕದವನ್ನು ತಟ್ಟಿ ಬರೀ ಗೈಯಲ್ಲಿ ವಾಪಸ್ ಬಂದಿರುವ ಮಾಜಿ ಸಚಿವ ವಿ ಸೋಮಣ್ಣ ಬೆನ್ನಲೆ, ಇದೀಗ ಮತ್ತೊಬ್ಬ ಬಿಜೆಪಿ ನಾಯಕ ರಾಜ್ಯಾಧ್ಯಕ್ಷನಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಆರ್.ಅಶೋಕ್‌ಗೆ ಸಂಕಷ್ಟ ತಂದಿಟ್ಟ ‘ಡಿ.ಕೆ. ಸಹೋದರರು’!
ಯಾದಗಿರಿಯ ಸುರಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮಾಜಿ ಶಾಸಕ ನರಸಿಂಹನಾಯಕ ರಾಜುಗೌಡ, ನಾನು ಬಿಜೆಪಿ ರಾಜ್ಯಾಧಕ್ಷನಾಗುವ ಪ್ರಭಾವಿ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳುವ ಮೂಲಕ ರಾಜ್ಯಾಧ್ಯಕ್ಷ ಸ್ಥಾನದ ಪಟ್ಟಿಯಲ್ಲಿ ಸೇರಿಕೊಂಡಿರುವ ಎರಡನೇ ನಾಯಕನಾಗಿದ್ದಾರೆ.
ಈ ಕುರಿತು ಯಾದಗಿರಿಯ ಹುಣಸಗಿಯಲ್ಲಿಂದು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗುವ ಬಗ್ಗೆ ಯೋಚನೆ ಮಾಡುತ್ತಿದ್ದಿನಿ. ಬಿಜೆಪಿ ರಾಜ್ಯಾಧ್ಯಕ್ಷನಾಗುವ ಪ್ರಭಾವಿ ಆಕಾಂಕ್ಷಿಯಾಗಿದ್ದೆನೆ. ನನ್ನನ್ನು ರಾಜ್ಯಾಧ್ಯಕ್ಷನಾಗಿ ಮಾಡುವ ಬಗ್ಗೆ ಕೇಳುತ್ತಿದ್ದೆನೆ ಎಂದು ತಿಳಿಸಿದರು.
ಇತ್ತಿಚೆಗೆ ಖಾಸಗಿ ಪಾರ್ಟಿಯೊಂದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಯವರನ್ನು ಭೇಟಿಯಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜುಗೌಡ, ಯಾವ ಮುಖ ಇಟ್ಟುಕೊಂಡು ನಾನು ಕಾಂಗ್ರೆಸ್ ಗೆ ಹೋಗಬೇಕು. ಚುನಾವಣೆಯಲ್ಲಿ ವಾಜಪೇಯಿ, ಇಂದಿರಾಗಾಂಧಿ, ಸಿದ್ದರಾಮಯ್ಯ ಅವರು ಸೋತಿಲ್ವಾ? ಸೋತಾಗ ಪಕ್ಷ ನಿಷ್ಠೆಗೆ ಬದ್ದವಾಗಿ ಕೆಲಸ ಮಾಡಿದರೆ ಉನ್ನತ್ತ ಹುದ್ದೆ ಬಂದೆ ಬರುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ನಾನು ಪಾರ್ಟ್ ಟೈಮ್ ಪಾಲಿಟಿಷನ್, ದಿನದ 24 ಗಂಟೆ ನಾನು ರಾಜಕೀಯ ಮಾಡಲ್ಲ, ನಾನು ಒಕ್ಕಲುತನ ಮಾಡುತ್ತೆನೆ. ಚುನಾವಣೆಯಲ್ಲಿ ಸೋತು ನಾನು ಈಗ ಕಷ್ಟದಲ್ಲಿದ್ದೇನೆ, ಅದೇ ರೀತಿ ಪಕ್ಷವೂ ಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಪಕ್ಷದ ಜೊತೆ ಇದ್ದರೆ ಮುಂದೆ ಉಜ್ವಲ ಭವಿಷ್ಯ ಇರುತ್ತದೆ ಎಂದರು.
ಇಂಡಿಯಾ ಹೆಸರು ಬದಲಾವಣೆ ವಿಷಯದ ಬಗ್ಗೆ ಮಾತನಾಡಿದ ರಾಜುಗೌಡ, ಭಾರತ ಎಂದು ಕರೆದರೆ ತಪ್ಪೆನು.? ಮಮ್ಮಿ – ಅಮ್ಮ ಎನ್ನುವುದರಲ್ಲಿ ವ್ಯತ್ಯಾಸವಿದೆ. ಫಾದರ್ – ಅಪ್ಪಾ ಎಂದು ಕರೆಯುವದರಲ್ಲಿ ವ್ಯತ್ಯಾಸವಿದೆ. ಬ್ರಿಟಿಷರು ಅವರಿಗೆ ಅನುಕೂಲವಾಗಲು ಇಂಡಿಯಾ ಎಂದು ಕರೆದಿದ್ದಾರೆ. ನಾವು ಹೃದಯದಿಂದ ‘ಭಾರತ’ ಎನ್ನುತ್ತೆವೆ. ಭಾರತವೆಂದು ಕರೆದರೆ ತಪ್ಪೆನಿದೆ ಇದರಲ್ಲಿ ರಾಜಕೀಯ ಯಾಕೆ ಬಂತು. ಪ್ರಧಾನಿ ಮೋದಿ ಅವರು ಜಗತ್ತು ಮೆಚ್ಚುವ ನಾಯಕನಾಗಿದ್ದಾರೆ ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.