Monday, December 11, 2023
spot_img
- Advertisement -spot_img

ಹೊಸ ಸಂಸತ್‌ ಭವನಕ್ಕೆ ಶಿಫ್ಟ್‌; ಕಿರಿಯ ಸಹಪಾಠಿಗಳಿಗೆ ದೇವೇಗೌಡರಿಂದ ಕಿವಿಮಾತು..

ನವದೆಹಲಿ: ಹಳೆಯ ಸಂಸತ್‌ ಭವನದಿಂದ ಇಂದು ನೂತನ ಸಂಸತ್‌ ಭವನಕ್ಕೆ ಅಧಿವೇಶನಕ್ಕೆ ಶಿಫ್ಟ್‌ ಆಗಿದೆ. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ಪತ್ರದ ಮೂಲಕ ತಮ್ಮ ರಾಜಕೀಯ ಜೀವನವನ್ನು ನೆನೆದಿದ್ದಾರೆ. ಜೊತೆಗೆ ತಮ್ಮ ಕಿರಿಯ ಸಹೋದ್ಯೋಗಿಗಳಿಗೆ ಕಿವಿಮಾತು ಕೂಡ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಹೆಚ್‌.ಡಿ.ದೇವೇಗೌಡರು, ʼನಾವೆಲ್ಲ ಇಂದು ಹೊಸ ಸಂಸತ್‌ ಭವನಕ್ಕೆ ಕಾಲಿಟ್ಟಿದ್ದೇವೆ. ಇದರ ಜೊತೆಗೆ ಹಳೆಯ ಕಟ್ಟಡದಿಂದ ಹಲವು ನೆನಪುಗಳು ಹಾಗೂ ಪ್ರಭಾಪ್ರಭುತ್ವದ ಶಕ್ತಿಯನ್ನೂ ಹೊತ್ತು ತಂದಿದ್ದೇವೆ.

ʼನಾನು 1991ರಲ್ಲಿ ಲೋಕಸಭೆ ಪ್ರವೇಶಿಸಿದರೂ ನಾನು ಕರ್ನಾಟಕ ಹಾಗೂ ರಾಜ್ಯ ವಿಧಾನಸಭೆಯಿಂದ ದೂರವಿದ್ದೇನೆ ಎಂದು ಎನಿಸಲಿಲ್ಲ. ದೇವರ ಆಶೀರ್ವಾದದಿಂದ ಪ್ರಧಾನ ಮಂತ್ರಿಯಾಗಿಯೂ ಸೇವೆ ಸಲ್ಲಿಸುವ ಸೌಭಾಗ್ಯ ನನಗೆ ಸಿಕ್ಕಿತುʼ.

ʼಹೊಸ ಸಂಸತ್‌ ಭವನವು ಪ್ರಗತಿಯ ಸಂಕೇತ. ಹೊಸ ಕಟ್ಟಡದ ಎರಡೂ ಮನೆಗಳಲ್ಲಿ ಹೆಚ್ಚು ಆಸನಗಳಿವೆ. ಹಿರಿಯ ಸದಸ್ಯನಾಗಿ ನನ್ನ ಕಿರಿಯ ಸಹೋದ್ಯೋಗಿಗಳಿಗೆ ಕೆಲ ಸಲಹೆಗಳನ್ನು ಕೊಡಲು ಬಯಸುತ್ತೇನೆ..ʼ

*ಸಂಸತ್‌ ಇರುವುದು ಚರ್ಚೆಗಳಿಗೆ ಹೊರತು, ಪ್ರತಿಭಟಿಸಲು ಅಲ್ಲ. ನಾನು ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಬಾರಿ ಸದನ ಬಾವಿಗೆ ಇಳಿಯಬೇಕಾಯಿತು. ಇದರ ಬಗ್ಗೆ ನನಗೆ ಬೇಸರವೂ ಇದೆ.

*ಪಾರ್ಲಿಮೆಂಟ್‌ನಲ್ಲಿರುವ ಲೈಬ್ರರಿಯನ್ನು ಸದುಪಯೋಗಪಡಿಸಿಕೊಳ್ಳಿ. ಈ ಮೂಲಕ ಶಾಸಕಾಂಗದ ಇತಿಹಾಸವನ್ನು ಸ್ಪಷ್ಟವಾಗಿ ತಿಳಿಯಿರಿ. ನಾನು ಮೊದಲಿಗೆ ದೆಹಲಿಗೆ ಬಂದಾಗ ನನಗೆ ಸ್ನೇಹಿತರೇ ಇರಲಿಲ್ಲ. ನನ್ನ ಹೆಚ್ಚಿನ ಸಮಯವನ್ನು ಲೈಬ್ರರಿಯಲ್ಲೇ ಕಳೆದಿದ್ದೆ. ಇದೇ ಕೆಲಸವನ್ನು ನಾನು ಕರ್ನಾಟಕ ವಿಧಾನಸಭೆ ಪ್ರವೇಶಿಸಿದಾಗಲೂ ಮಾಡಿದೆ. ಸದನಕ್ಕೆ ಬರುವ ಮುನ್ನ ದಯವಿಟ್ಟು ವಿಷಯಗಳೊಂದಿಗೆ ತಯಾರಾಗಿ ಬನ್ನಿ, ಚರ್ಚೆಯಲ್ಲಿ ಪಾಲ್ಗೊಳ್ಳಿ.

*ಭಾರತವು ಬಹುಪಕ್ಷಗಳ ಪ್ರಜಾಪ್ರಭುತ್ವ ಹೊಂದಿದೆ. ದೇಶದ ಪ್ರಗತಿಗೆ ಹಾಗೂ ಪ್ರಜಾಪ್ರಭುತ್ವಕ್ಕಾಗಿ ಸಣ್ಣ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳೂ ಕೊಡುಗೆ ನೀಡಿದ್ದಾರೆ ಎನ್ನುವುದನ್ನು ದೊಡ್ಡ ಪಕ್ಷಗಳು ಅರಿತುಕೊಳ್ಳಬೇಕು. ಇದನ್ನು ನಾನು ಪ್ರಾದೇಶಿಕ ಪಕ್ಷಗಳ ಪ್ರತಿನಿಧಿಯಾಗಿ ಹೇಳಲು ಬಯಸುತ್ತೇನೆ.

ಇದನ್ನೂ ಓದಿ: Old Parliament vs New Parliament : ಹಳೆಯ ಸಂಸತ್ vs ಹೊಸ ಸಂಸತ್ ಭವನ: ಈ ಎರಡರ ಪ್ರಮುಖ ವ್ಯತ್ಯಾಸಗಳೇನು ಗೊತ್ತಾ?

*ಬಡವರು, ರೈತರು, ಶೋಷಿತರು, ಅಲ್ಪಸಂಖ್ಯಾತರು, ಸಾಮಾಜಿಕವಾಗಿ ಹಿಂದುಳಿಯಲ್ಪಟ್ಟವರನ್ನು ಸಂಸತ್‌ ಯಾವ ಕಾರಣಕ್ಕೂ ಮರೆಯಬಾರದು. ಹೊಸ ಸಂಸತ್‌ನ ಬಹುತೇಕ ಸಮಯವು ಈ ಉದ್ದೇಶಕ್ಕೆ ಬಳಕೆಯಾಗುತ್ತದೆ ಎಂದು ಭಾವಿಸಿದ್ದೇನೆ. ಹೊಸ ಸಂಸತ್‌ನಲ್ಲಿ ಸಂತಸ, ಶಾಂತಿ ತುಂಬಿರಲಿ ಎಂದಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles