ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬುಧವಾರ ರಾಜಸ್ಥಾನ ತಲುಪಿದ್ದು ಈ ಯಾತ್ರೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಭಾಗಿಯಾಗಿ ರಾಹುಲ್ ಜೊತೆ ಹೆಜ್ಜೆಹಾಕಿದ್ದಾರೆ.
ಇಂದು ಬೆಳಗ್ಗೆ ಸವಾಯ್ ಮಾದೋಪುರ್ ಭಡೋತಿಯಿಂದ ಯಾತ್ರೆ ಆರಂಭವಾಗಿದ್ದು, ರಾಜನ್ ಕೆಲ ಹೊತ್ತು ರಾಹುಲ್ ಜತೆ ಹೆಜ್ಜೆ ಹಾಕಿದ್ದಾರೆ. ಮೋದಿ ಸರ್ಕಾರದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ರಘುರಾಮ್ ರಾಜನ್, ಭಾರತದ ಭವಿಷ್ಯವು ಉದಾರವಾದಿ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳನ್ನು ಬಲಪಡಿಸುವುದರಲ್ಲಿ ಅಡಗಿದೆ. ಏಕೆಂದರೆ ಅದು ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಅವಶ್ಯಕವಾಗಿದೆ ಎಂದಿದ್ದರು. ನೋಟು ರದ್ದತಿ ನಿರ್ಧಾರ ಬಗ್ಗೆ ಟೀಕಿಸಿದ್ದ ರಾಜನ್, ಆರ್ಥಿಕ ಹಿಂಜರಿತಕ್ಕೆ ಮೋದಿ ಸರ್ಕಾರದ ರಾಜಕೀಯ ಮತ್ತು ಸಾಮಾಜಿಕ ನೀತಿಗಳೇ ಕಾರಣ ಎಂದಿದ್ದರು. ರಾಜನ್ ಟೀಕೆಗೆ ಬಿಜೆಪಿ ಕಟುವಾಗಿಯೇ ಪ್ರತಿಕ್ರಿಯಿಸಿತ್ತು. ಅಂದಹಾಗೆ, ಭಾರತ್ ಜೋಡೋ ಯಾತ್ರೆಯಲ್ಲಿ ರಾಜನ್ ಭಾಗಿಯಾಗಿರುವುದು ಕಾಂಗ್ರೆಸ್‌ಗೆ ಸಂಬಂಧಿಸಿದಂತೆ ಅಚ್ಚರಿಯ ಸಂಗತಿ ಏನೂ ಅಲ್ಲ. ದೇಶದಲ್ಲಿನ ಏಕತೆಗಾಗಿ ಎಂಬ ಗುರಿಯೊಂದಿಗೆ ಕಾಂಗ್ರೆಸ್ ಹಮ್ಮಿಕೊಂಡಿರುವ ಈ ಭಾರತ್ ಜೋಡೋ ಯಾತ್ರೆಯಲ್ಲಿ ಸಮಾನ ಮನಸ್ಕರು ರಾಹುಲ್ ಜತೆ ಹೆಜ್ಜೆ ಹಾಕಿದ್ದಾರೆ. ಅದೇ ವೇಳೆ ಈ ಯಾತ್ರೆಯ ಮೂಲಕ ಕಾಂಗ್ರೆಸ್ ಜನರೊಂದಿಗೆ ಬೆರೆಯುತ್ತಿದ್ದರೂ, ಪಕ್ಷದೊಳಗಿನ ಬಿಕ್ಕಟ್ಟು ಆಗಾಗ್ಗೆ ತಲೆದೋರುತ್ತಿದೆ. ಈ ಯಾತ್ರೆ ಆರಂಭವಾದಾಗಲೇ ಗುಲಾಂ ನಬೀ ಆಜಾದ್ ಪಕ್ಷ ತೊರೆದು ಹೋದರು, ರಾಜಸ್ಥಾನದಲ್ಲಿ ಪಕ್ಷದ ಆಂತರಿಕ ಕಚ್ಚಾಟಗಳು ಬಹಿರಂಗವಾಗಿದ್ದವು. ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ 10ನೇ ದಿನಕ್ಕೆ ಕಾಲಿಟ್ಟಿದೆ. ಬಮನ್ ವಾಸ್ ವಿಧಾನಸಭಾ ಕ್ಷೇತ್ರದಲ್ಲಿರು ಭಡೋತಿ ಗ್ರಾಮದಿಂದ ಆರಂಭವಾದ ಈ ಯಾತ್ರೆ ಇಂದು ಸುಮಾರು 25 ಕಿಮೀ ಕ್ರಮಿಸಲಿದೆ. ಸದ್ಯ ಮೊದಲ ವಿರಾಮದ ನಂತರ ಯಾಕ್ರೆ ದೌಸಾ ಜಿಲ್ಲೆಗೆ ಪ್ರವೇಶಿಸಲಿದ್ದು, ಭಗ್ದಿ ಗ್ರಾಮದಲ್ಲಿ ನಿಲುಗಡೆಯಾಗಲಿದೆ. ಭಾರತ್ ಜೋಡೋ ಯಾತ್ರೆ ಪ್ರವೇಶಿಸುತ್ತಿರುವ ಐದನೇ ಜಿಲ್ಲೆಯಾಗಲಿದೆ ದೌಸಾ. ಈ ಯಾತ್ರೆ ಮುಂದುವರಿದಂತೆ ಗೋವಿಂದ್ ದೋತಸರ, ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಮತ್ತು ಇತರ ನಾಯಕರು ಇದರಲ್ಲಿ ಭಾಗಿಯಾಗಲಿದ್ದಾರೆ.