ವಿಜಯಪುರ: ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ವಿಜಯಪುರದಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿ, ಪತ್ರಕರ್ತರು ಮೇಲ್ಮನೆಯಲ್ಲಿ ಸದಸ್ಯರಾಗಬೇಕು ಎಂಬ ಭಾವನೆ ನನಗೂ ಇದೆ. ಆದರೆ, ಈ ಬಗ್ಗೆ ಸಾಧ್ಯಸಾಧ್ಯತೆ ಪರಿಶೀಲನೆ ಮಾಡಬೇಕಿದೆ. ನಿವೃತ್ತ ಪತ್ರಕರ್ತರಿಗೆ ಮಾಸಾಶನ ಹೆಚ್ಚಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲಾಗುವುದು, ಹೀಗಾಗಿ, ಪತ್ರಕರ್ತರನ್ನು ಕಾರ್ಮಿಕರ ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ ಸಂಘ ಇಟ್ಟ ಬೇಡಿಕೆ ಪರಿಶೀಲಿಸಲಾಗುವುದು ಎಂದರು.
ರಾಜಕಾರಣಿ ಹಾಗೂ ಪತ್ರಕರ್ತರ ನಡುವೆ ಅವಿನಾಭಾವ ಸಂಬಂಧವಿದೆ. ಒಂದು ರೀತಿಯಲ್ಲಿ ಗಂಡ-ಹೆಂಡತಿಯರ ಸಂಬಂಧದಂತೆ. ಆದರೆ, ಈ ಸಂಬಂಧ ಪ್ರಾಮಾಣಿಕವಾಗಿರಬೇಕು. ಪತ್ರಕರ್ತರು ಇರದಿದ್ದರೆ ರಾಜಕಾರಣಿ ಮಾತನಾಡಿಸುವವರು ಯಾರೂ ಇರುತ್ತಿರಲಿಲ್ಲ. ಇನ್ನೊಂದೆಡೆ ರಾಜಕಾರಣಿಗಳು ಇರದೇ ಇದ್ದರೆ ಪತ್ರಿಕೆಗಳನ್ನು ಯಾರು ಓದಬೇಕು, ನಾವು ಜಗಳವಾಡಬಹುದು, ಒಂದು ರೀತಿ ಗಂಡ-ಹೆಂಡತಿಯ ಸಂಬಂಧದಂತೆ ಎಂದರು.
ನನಗೆ ರಾಜ್ಯದ ದೊರೆ ಎನ್ನಬೇಡಿ. ದೊರೆ ಎಂದರೆ ನನಗೆ ಕಸಿವಿಸಿಯಾಗುತ್ತದೆ. ನಾನಿರುವುದು ಜನರ ಸೇವಕನ ಸ್ಥಾನದಲ್ಲಿ ಎಂದು ಹೇಳಿದರು.