ಬೆಂಗಳೂರು : ಏಪ್ರಿಲ್ 1ರಿಂದ ದುಡಿಯುವ ಮಹಿಳೆಯರಿಗೆ ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನಸೌಧದ ಮುಂಭಾಗದಲ್ಲಿ ಕೆಎಸ್ ಆರ್ ಟಿಸಿಯ ಅಂಬಾರಿ ಉತ್ಸವ ಬಸ್‍ಗೆ ಚಾಲನೆ ನೀಡಿ ಮಿನಿ ಸ್ಕೂಲ್ ಬಸ್ ಗಳನ್ನು ಪರಿಚಯಿಸಬೇಕು, ಇರುವ ಬಸ್ ಗಳ ಸಂಚಾರ ಆರಂಭ ಮಾಡಬೇಕು, ಅಗತ್ಯ ಬಿದ್ರೆ ಇನ್ನಷ್ಟು ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಹೊಸ ಸಂಚಾರದ ವಿಶೇಷವಾಗಿರುವ ಅಂಬಾರಿ ಉತ್ಸವ ಬಸ್ಸನ್ನು ಲೋಕಾರ್ಪಣೆ ಮಾಡಿದ್ದೇವೆ. ಇದರಲ್ಲಿ ಸ್ಲೀಪರ್ ವ್ಯವಸ್ಥೆ ಇದ್ದು, ರೈಲ್ವೆ ಮಾದರಿಯಲ್ಲಿ ವ್ಯವಸ್ಥೆ ಇದೆ. ಹಿಂದೆ ವೊಲ್ವೊ ಬಸ್ ಗಳು ಹೆಚ್ಚು ಅನುಕೂಲಕರವಾಗಿರಲಿಲ್ಲ ಎಂದು ಹೇಳಿದರು. ಶಾಲೆ ಆರಂಭವಾಗುವ ಸಂದರ್ಭಕ್ಕೆ ಪ್ರತಿ ತಾಲೂಕಿನಲ್ಲಿ ಕನಿಷ್ಟ ಐದಾರು ಬಸ್ ಸಂಚಾರ ಆರಂಭ ಮಾಡಬೇಕು. ಸರ್ಕಾರ ನೌಕರ ವರ್ಗ ಹಾಗೂ ಆಡಳಿತ ಮಂಡಳಿ ಜೊತೆಗೂ ಇರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಾನು ಕೆಂಪ್ ಬಸ್‍ನಲ್ಲಿ ಹತ್ತಿ ಕಾಲೇಜಿಗೆ ಹೋಗಿದ್ದೇನೆ. ಆಗ ಡ್ರೈವರ್ ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಇತ್ತು. ಗ್ರಾಮಿಣ ಜನರು ತಮ್ಮ ಪ್ರಯಾಣವನ್ನು ಬಸ್‍ಗಳ ಮೂಲಕವೇ ಗುರುತಿಸಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.