ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ ವಾರಿಯರ್ ಎಂದು ಚಪ್ಪಾಳೆ ತಟ್ಟುವುದು ಬೇಡ. ಅವರ ಬೇಡಿಕೆಗಳನ್ನು ಈಡೇರಿಸಿ ಎಂದು ನಟ ಚೇತನ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಹೋರಾಟ ಅಗತ್ಯವಾಗಿದೆ. ಪ್ರತಿಯೊಂದು ಮಹಿಳೆಯರು ಸಮಾಜದ ಅಭಿವೃದ್ಧಿಗೆ ಅವಶ್ಯಕವಾಗಿದ್ದಾರೆ ಎಂದರು.
ಕೋವಿಡ್ ಸಮಯದಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದರೂ ಅಂಗನವಾಡಿ ಕಾರ್ಯಕರ್ತೆಯರುಗೆ ಸಹಾಯ ಆಗುತ್ತಿಲ್ಲ. ಕೋವಿಡ್ ವಾರಿಯರ್ ಅಂತ ಚಪ್ಪಾಳೆ ತಟ್ಟುತ್ತಾರೆ. ಆದರೆ, ಅವರಿಗೆ ಆ ಚಪ್ಪಾಳೆ ಬೇಕಾಗಿಲ್ಲ. ಬೇಡಿಕೆಗಳನ್ನು ಈಡೇರಿಸಿ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಸಂಜೆಯೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸಿರುವ ಆದೇಶ ಜಾರಿಯಾಗದಿದ್ದರೆ ನಾಳೆ ಮುಖ್ಯಮಂತ್ರಿ ಮನೆ ಮುತ್ತಿಗೆ ಹಾಕುವ ಬಗ್ಗೆ ಗಡುವು ನೀಡಿದ್ದಾರೆ.
ಒಂದು ವೇಳೆ ಸಿಎಂ ಮನೆಯನ್ನು ಮುತ್ತಿಗೆ ಹಾಕಲು ಅಂಗನವಾಡಿ ಕಾರ್ಯಕರ್ತೆಯರು ತೆರಳಿದಲ್ಲಿ ಅವರೊಂದಿಗೆ ನಾನೂ ಹೋರಾಟಕ್ಕೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.