ಹುಬ್ಬಳ್ಳಿ : ಎಸ್ ಸಿ ಹಾಗೂ ಎಸ್ ಟಿ ಇಲಾಖೆಗಳಿಗೆ ನೀಡಿದ ಹಣ ಯಾವುದೇ ಕಾರಣಕ್ಕೂ ಬೇರೆ ಕಾರ್ಯಗಳಿಗೆ ಅಥವಾ ಐದು ಗ್ಯಾರಂಟಿಗಳಿಗೆ ಕೊಡುವುದಕ್ಕೆ ಬರುವುದಿಲ್ಲ. ಆ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಬಾರದು ಎಂದು 7D ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್ ಸಿ ಮಹದೇವಪ್ಪ ಹೇಳಿಕೆ ನೀಡಿದ್ದಾರೆ.
ನಗರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಇಲಾಖೆಯಿಂದ ವಿವಿಧ ಇಲಾಖೆಗಳ ಅಡಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಯೋಚನೆಯಿದೆ. ಅದಕ್ಕಾಗಿ ಈಗಾಗಲೇ ಎಸ್‌ಸಿಪಿ-ಟಿಎಸ್‌ಪಿ ಅನುದಾನದಲ್ಲಿಯ 34 ಸಾವಿರ ಕೋಟಿ ರೂ. ನಮ್ಮ ಇಲಾಖೆಗೆ ಸರ್ಕಾರ ಕೊಟ್ಟಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ‘ಸನಾತನ ಧರ್ಮ ನಿರ್ಮೂಲನೆ’ ಹೇಳಿಕೆ; ಕ್ರಿಶ್ಚಿಯನ್ ಮಿಷನರಿಗಳು ಬೆಳೆಸುವ ಕಲ್ಪನೆ ಎಂದ ಅಣ್ಣಾಮಲೈ
ಇದರಲ್ಲಿ 24 ಸಾವಿರ ಕೋಟಿ ರೂ. ಎಸ್‌ಸಿಗೆ ಹಾಗೂ 8 ರಿಂದ 9 ಸಾವಿರ ಕೋಟಿ ರೂ. ಎಸ್ ಟಿ ಸಮುದಾಯಗಳ ಕಲ್ಯಾಣ ಕಾರ್ಯಗಳಿಗೆ ಮೀಸಲಿರಿಸಲಾಗಿದೆ. ಈಗಾಗಲೇ ಸುಮಾರು 40 ಇಲಾಖೆಗಳಿಗೆ ಅನುದಾನ ಹಂಚಲಾಗಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿಈ ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಎಸ್‌ಸಿ-ಎಸ್‌ಟಿ ಇಲಾಖೆಯ ಹಣ ಐದು ಗ್ಯಾರಂಟಿಗಳಿಕೆ ಬಳಕೆಯಾಗುತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಆರೋಪ ಸುಳ್ಳಾಗಿದೆ. ಎಸ್‌ಸಿಪಿ-ಟಿಎಸ್‌ಪಿ ಇದು ಮಂಜೂರು ಮಾಡಲಾಗದ ಅನುದಾನವಾಗಿದ್ದು, ಯಾವುದೇ ಕಾರಣಕ್ಕೂ ಬೇರೆ ಕಡೆ ಅಥವಾ ಐದು ಗ್ಯಾರಂಟಿಗಳಿಗೆ ವಿನಿಯೋಗಿಸಲು ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ‘ಕಾಂಗ್ರೆಸ್ ನಿಂದ ಬಿಜೆಪಿ ಶಾಸಕರು ಬರುತ್ತಾರೆ’ ಎಂಬ ಹೇಳಿಕೆಯ ಬಗ್ಗೆ ಮಾತನಾಡಿದ ಮಹದೇವಪ್ಪ, ಆ ತರಹ ಮಾಡಿ, ಮಾಡಿನೇ ಬಿಜೆಪಿ ಬೀದಿಗೆ ಬಂದಿದೆ. ಜನರ ಆದೇಶನೇ ಬೇರೆ, ಜನರ ಆಶೋತ್ತರಗಳ ವಿರುದ್ಧ ನಡೆದುಕೊಂಡಿದ್ದರಿಂದ 2008 ಹಾಗೂ 2018ರಲ್ಲಿಯೂ ಬಹುಮತ ಬರಲಿಲ್ಲ ಎಂದು ಕಿಡಿ ಕಾರಿದರು.
ಹೊಸ ಆಪರೇಷನ್ ಕಮಲ ಮಾಡಿದ್ದರಲ್ಲ ಏನಾಯಿತು? ಕರ್ನಾಟಕದ ಇತಿಹಾಸದಲ್ಲಿಯೇ ವಿರೋಧ ಪಕ್ಷದ ನಾಯಕನಿಲ್ಲಿದೇ ನಿಂತಿರುವ ಪಕ್ಷ ಬಿಜೆಪಿಯಾಗಿದೆ. ಯಾರು ಕೂಡ ಬಿಜೆಪಿಗೆ ನಮ್ಮ ಶಾಸಕರು ಹೋಗಲ್ಲ. ಸರ್ಕಾರದ ಸ್ಥಿರವಾಗಿದೆ ಹಾಗೂ ಭದ್ರವಾಗಿದೆ. ನಾವು ಅವಧಿಪೂರ್ಣಗೊಳಿಸುತ್ತೇವೆ ಎಂದು ತಿರುಗೇಟು ನೀಡಿದರು.
ಕಾವೇರಿ ವಿವಾದ ಇದು ನೂರು ವರ್ಷಗಳ ವಿವಾದವಾಗಿದೆ. ಈ ವಿಷಯವನ್ನು ಕೋರ್ಟ್ ತೀರ್ಮಾನ ಕೈಗೊಳ್ಳುತ್ತದೆ. ನಮಗೆ ಈ ಸಲ ಕಡಿಮೆ ಪ್ರಮಾಣದಲ್ಲಿ ಮಳೆ ಆಗಿದ್ದರಿಂದ ಸಾಕಷ್ಟು ನೀರಿನ ಸಂಗ್ರಹ ಅಗಿಲ್ಲ. ಇನ್ನೂ ಇದೊಂದು ಸಂಕಷ್ಟದ ಪರಿಸ್ಥಿತಿ ಈ ಸಂಕಷ್ಟಕ್ಕೆ ಸೂತ್ರ ಇನ್ನೂ ಬಂದಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡಿ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಸಚಿವರು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.