ನವದೆಹಲಿ : ಜಿ20 ಶೃಂಗಸಭೆ ಹಿನ್ನೆಲೆ ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ (ಸೆ.8) ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಜಿ20 ಶೃಂಗಸಭೆ ನಡೆಯುವ ಸ್ಥಳ ಮತ್ತು ಪ್ರತಿನಿಧಿಗಳು ತಂಗಿರುವ ಹೋಟೆಲ್‌ಗಳಿರುವ ಪ್ರದೇಶಗಳಲ್ಲಿ ಔಷಧಿಗಳನ್ನು ಹೊರತುಪಡಿಸಿ ಇತರ ಆನ್‌ಲೈನ್ ವಿತರಣಾ ಸೇವೆಗಳನ್ನು ನಿರ್ಬಂಧಿಸಲಾಗಿದೆ.
ಇಂದು ಬೆಳಿಗ್ಗೆ 5 ಗಂಟೆಯಿಂದ ಭಾನುವಾರ ರಾತ್ರಿ 11.59ರವರೆಗೆ ದೆಹಲಿ ಜಿಲ್ಲೆಯನ್ನು ನಿಯಂತ್ರಿತ ವಲಯ-1 ಎಂದು ಗೊತ್ತುಪಡಿಸಲಾಗಿದೆ. ವಾಕಿಂಗ್, ಸೈಕ್ಲಿಂಗ್ ಮತ್ತು ಪ್ರವಾಸಕ್ಕಾಗಿ ಇಂಡಿಯಾ ಗೇಟ್ ಮತ್ತು ಕರ್ತವ್ಯ ಪಥ್‌ಗೆ ಭೇಟಿ ನೀಡದಂತೆ ಪೊಲೀಸರು ಜನರಿಗೆ ಮನವಿ ಮಾಡಿದ್ದಾರೆ.
ನವದೆಹಲಿ ಜಿಲ್ಲೆಯಲ್ಲಿ ವಾಹನಗಳ ಸಂಚಾರವನ್ನು ನಿಯಂತ್ರಿಸಲಾಗುವುದು. ಆಂಬ್ಯುಲೆನ್ಸ್‌ಗಳು, ಸ್ಥಳೀಯರು ಮತ್ತು ಈ ಪ್ರದೇಶದಲ್ಲಿ ತಂಗಿರುವ ಪ್ರವಾಸಿಗರು ಸರಿಯಾದ ಗುರುತಿನ ಪತ್ರಗಳನ್ನು ಹಾಜರುಪಡಿಸುವ ಮೂಲಕ ಪ್ರಯಾಣಿಸಲು ಅನುಮತಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಜಿ20 ಶೃಂಗಸಭೆ: ದೆಹಲಿಯಲ್ಲಿ 130000 ಸಿಬ್ಬಂದಿ, ಬುಲೆಟ್ ಪ್ರೂಫ್ ಕಾರು, ಡ್ರೋನ್; ಹೇಗಿದೆ ನೋಡಿ ಬಿಗಿಭದ್ರತೆ!
ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರ ಕೋರಿಕೆಯ ಮೇರೆಗೆ ದೆಹಲಿ ಮೆಟ್ರೋ ಸೆಪ್ಟೆಂಬರ್ 8, 9 ಮತ್ತು 10 ರಂದು ಎಲ್ಲಾ ನೆಟ್‌ವರ್ಕ್‌ಗಳ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗೆ 4 ರಿಂದ ತನ್ನ ಸೇವೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ. ಶೃಂಗಸಭೆಯ ಸಮಯದಲ್ಲಿ ಎಲ್ಲಾ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಡಲು ಶ್ವಾನದಳ ಮತ್ತು ಓಂಟೆದಳ ಪೊಲೀಸರೊಂದಿಗೆ 50,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಸಂಚಾರ ಪೊಲೀಸರು ಆಗಸ್ಟ್ 25 ರಂದು ನೀಡಿರುವ ಮಾಹಿತಿ ಪ್ರಕಾರ, ಸರಕು ವಾಹನ, ಬಸ್, ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳ ಸಂಚಾರ ನಿಯಂತ್ರಿಸುವ ಬಗ್ಗೆ ನಿಯಮಗಳನ್ನು ರೂಪಿಸಿದ್ದಾರೆ. ಜನರು ಸಾಧ್ಯವಾದಷ್ಟು ಮೆಟ್ರೋ ಸೇವೆಗಳನ್ನು ಬಳಸಲು ಅಧಿಕಾರಿಗಳು ಕೋರಿದ್ದಾರೆ. ನಿರ್ಬಂಧಿತ ಪ್ರದೇಶಗಳು ಮತ್ತು ಸಂಚಾರ ಅನುಮತಿಸಿರುವ ಮಾರ್ಗಗಳ ಬಗ್ಗೆ ತಿಳಿದುಕೊಳ್ಳಲು ಸಾರ್ವಜನಿಕರು ನ್ಯಾವಿಗೇಷನ್ ಅಪ್ಲಿಕೇಶನ್ ‘ಮ್ಯಾಪ್‌ಮಿಂಡಿಯಾ’ ಅನ್ನು ಬಳಸಲು ಪೊಲೀಸರು ಸಲಹೆ ನೀಡಿದ್ದಾರೆ.
ಪೋಸ್ಟಲ್ ಮತ್ತು ವೈದ್ಯಕೀಯ ಸೇವೆಗಳಂತಹ ಅಗತ್ಯ ಸೇವೆ ಮತ್ತು ಪ್ರಯೋಗಾಲಯಗಳಿಂದ ಮಾದರಿ ಸಂಗ್ರಹಣೆಯನ್ನು ದೆಹಲಿಯಾದ್ಯಂತ ಅನುಮತಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಹೋಟೆಲ್, ಆಸ್ಪತ್ರೆ ಮತ್ತು ಇತರ ಪ್ರಮುಖ ಸಂಸ್ಥೆಗಳಿಗೆ ತೆರಳುವ ಸ್ವಚ್ಛತಾ ಕಾರ್ಯ, ಅಡುಗೆ ಮತ್ತು ತ್ಯಾಜ್ಯ ನಿರ್ವಹಣೆ ಸಿಬ್ಬಂದಿ ಮತ್ತು ವಾಹನಗಳನ್ನು ಪರಿಶೀಲನೆಯ ನಂತರ ಬಿಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ : 6 ರಾಜ್ಯಗಳ ವಿಧಾನಸಭಾ ಉಪ ಚುನಾವಣೆ ಫಲಿತಾಂಶ ಇಂದು ಪ್ರಕಟ
ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೆ ಸುಮಾರು 16 ರಸ್ತೆಗಳು ಮತ್ತು ಜಂಕ್ಷನ್‌ಗಳನ್ನು ‘ನಿಯಂತ್ರಿತ ವಲಯ-II ಎಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಡಬ್ಲ್ಯೂ-ಪಾಯಿಂಟ್, ಎ-ಪಾಯಿಂಟ್, ಡಿಡಿಯು ಮಾರ್ಗ, ವಿಕಾಸ್ ಮಾರ್ಗ (ನೋಯ್ಡಾ ಲಿಂಕ್ ರೋಡ್-ಪುಸ್ತಾ ರಸ್ತೆವರೆಗೆ), ಬಹದ್ದೂರ್ ಷಾ ಜಾಫರ್ ಮಾರ್ಗ ಮತ್ತು ದೆಹಲಿ ಗೇಟ್ ಸೇರಿವೆ.
ಎಲ್ಲಾ ರೀತಿಯ ಸರಕು ವಾಹನಗಳು, ವಾಣಿಜ್ಯ ವಾಹನಗಳು, ಅಂತಾರಾಜ್ಯ ಬಸ್ ಗಳು, ದೆಹಲಿ ಸಾರಿಗೆ ನಿಗಮದ ಬಸ್ ಗಳು ಮತ್ತು ದೆಹಲಿ ಇಂಟಿಗ್ರೇಟೆಡ್ ಮಲ್ಟಿ-ಮೋಡಲ್ ಟ್ರಾನ್ಸಿಟ್ ಸಿಸ್ಟಮ್ ರೈಲುಗಳು ಸೆಪ್ಟೆಂಬರ್ 8ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 10ರ ರಾತ್ರಿ 11.59 ರವರೆಗೆ ಮಥುರಾ ರಸ್ತೆ (ಆಶ್ರಮ ಚೌಕ್ ), ಭೈರೋನ್ ರಸ್ತೆ, ಪುರಾಣ ಕ್ವಿಲಾ ರಸ್ತೆ ಮತ್ತು ಪ್ರಗತಿ ಮೈದಾನದ ಸುರಂಗದ ಒಳಗೆ ಸಂಚರಿಸಲು ಅವಕಾಶವಿಲ್ಲ.
ಜಿ20 ನಾಯಕರ ಶೃಂಗಸಭೆ ಸೆಪ್ಟೆಂಬರ್ 9 ಮತ್ತು10ರಂದು ನಡೆಯಲಿದೆ. ಶೃಂಗಸಭೆಯಲ್ಲಿ 30ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು, ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು, ಆಹ್ವಾನಿತ ಅತಿಥಿ ದೇಶಗಳು ಹಾಗೂ 14 ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.