ಹೈದರಾಬಾದ್ : ಜಾನಪದ ಗಾಯಕ, ತೆಲಂಗಾಣದ ನಾಡು, ನುಡಿಗಾಗಿ ಹೋರಾಟ ಮಾಡಿದ್ದ ದಿ. ಗುಮ್ಮಡಿ ವಿಠ್ಠಲ್ ರಾವ್ (ಗದ್ದರ್) ಅವರ ಕುಟುಂಬಸ್ಥರನ್ನು ಕಾಂಗ್ರೆಸ್ ನಾಯಕರು ಭೇಟಿಯಾದರು.
ಹೈದರಾಬಾದ್ ನಗರದ ಹೊರವಲಯ ತುಕ್ಕುಗುಡದಲ್ಲಿ ಭಾನುವಾರ ಬೃಹತ್ ಕಾಂಗ್ರೆಸ್ ಸಮಾವೇಶ ‘ವಿಜಯಭೇರಿ’ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಂದು ಮುಂಜಾನೆ ಗದ್ದರ್ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಇದನ್ನೂ ಓದಿ : ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್ ಗ್ಯಾರಂಟಿ; ಫ್ರೀ ಕರೆಂಟು, ₹500ಕ್ಕೆ LPG, ಮಹಾಲಕ್ಷ್ಮಿಗೆ ₹2,500…
ಸೋನಿಯಾ ಗಾಂಧಿ ಅನಾರೋಗ್ಯದ ಕಾರಣದಿಂದ ಗದ್ದರ್ ಕುಟುಂಬಸ್ಥರನ್ನೇ ತಮ್ಮ ಬಳಿಗೆ ಕರೆಸಿಕೊಂಡು ಸಾಂತ್ವನ ಹೇಳಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ತೆಲಂಗಾಣ ಕಾಂಗ್ರೆಸ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ದಿ. ಗದ್ದರ್ ಅವರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಸೋನಿಯಾ ಗಾಂಧಿಗೆ ಗದ್ದರ್ ಅತ್ಯಂತ ಆತ್ಮೀಯ ವ್ಯಕ್ತಿಯಾಗಿದ್ದರು. ಜನರ ಹಕ್ಕುಗಳಿಗಾಗಿ ಹೋರಾಡಿದ ಅವರ ಉತ್ಸಾಹವನ್ನು ಸೋನಿಯಾ ಗಾಂಧಿ ಶ್ಲಾಘಿಸಿದ್ದಾರೆ ಎಂದು ಹೇಳಿದೆ.
ಜಾನಪದ ಗಾಯಕ, ಕ್ರಾಂತಿಕಾರಿ ಹೋರಾಟಗಾರ ‘ಗದ್ದರ್’ ಎಂದೇ ಖ್ಯಾತಿ ಪಡೆದಿದ್ದ 77 ವರ್ಷದ ಗುಮ್ಮಡಿ ವಿಠಲ್ ರಾವ್ ಅವರು, ಶ್ವಾಸಕೋಶ ಮತ್ತು ಮೂತ್ರ ಪಿಂಡದ ಅನಾರೋಗ್ಯಕ್ಕೆ ಒಳಗಾಗಿ ಆಗಸ್ಟ್ 5, 2023ರಂದು ನಿಧನರಾದರು. ಗದ್ದರ್ ಅವರು ಪ್ರತ್ಯೇಕ ತೆಲಂಗಾಣ ರಾಜ್ಯ ಮತ್ತು ತೆಲುಗು ನಾಡಿನ ತಳ ಸಮುದಾಯಗಳ ಜನರ ಹಕ್ಕುಗಳಿಗಾಗಿ ಹೋರಾಟ ನಡೆಸಿ ಗಮನ ಸೆಳೆದಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.