ಕ್ಯಾಂಡಿ : ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯ ಹೆಸರನ್ನು ಅಭಿಮಾನಿಗಳು ಜೋರಾಗಿ ಕೋಗಿದ್ದಕ್ಕೆ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಮಧ್ಯದ ಬೆರಳು ತೋರಿಸಿದ ವಿಡಿಯೋ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಸೋಮವಾರ ಶ್ರೀಲಂಕಾದ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಏಷ್ಯಾ ಕಪ್-2023ರ ಅಂಗವಾಗಿ ಭಾರತ ಮತ್ತು ನೇಪಾಳ ನಡುವಿನ ಗುಂಪು ಹಂತದ ಪಂದ್ಯ ನಡೆಯಿತು. ಗೌತಮ್ ಗಂಭೀರ್ ಈ ಪಂದ್ಯದ ಕಾಮೆಂಟರಿ ಪ್ಯಾನೆಲ್‌ನ ಭಾಗವಾಗಿದ್ದರು. ಕಾಮೆಂಟರಿ ಬಾಕ್ಸ್‌ನಿಂದ ಗಂಭೀರ್ ಹೊರ ಬರುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿ ಮತ್ತು ಎಂ.ಎಸ್ ಧೋನಿ ಹೆಸರನ್ನು ಜೋರಾಗಿ ಕೂಗಿದ್ದಾರೆ. ಈ ವೇಳೆ ತಾಳ್ಮೆ ಕಳೆದುಕೊಂಡ ಗಂಭೀರ್, ತನ್ನ ಮಧ್ಯದ ಕೈ ಬೆರಳು ತೋರಿಸಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದೆ.
ಗಂಭೀರ್ ಸ್ಪಷ್ಟನೆ : ತನ್ನ ವರ್ತನೆಯ ವಿರುದ್ಧ ಆಕ್ರೋಶ ಭುಗಿಲೇಳುತ್ತಿದ್ದಂತೆ ಸಮಜಾಯಿಸಿ ನೀಡಿದ ಗಂಭೀರ್, ‘ಅಭಿಮಾನಿಗಳ ಗುಂಪಿನಲ್ಲಿದ್ದ ಕೆಲವರು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರು. ಕಾಶ್ಮೀರದ ವಿಷಯ ಪ್ರಸ್ತಾಪಿಸಿದರು. ಈ ಕಾರಣಕ್ಕೆ ನಾನು ಮಧ್ಯದ ಬೆರಳು ತೋರಿಸಿದೆ’ ಎಂದು ಹೇಳಿದ್ದಾರೆ. ಆದರೆ, ರಾಷ್ಟ್ರೀಯ ಮಾಧ್ಯಮಗಳ ವರದಿಗಳು, ವೈರಲ್ ವಿಡಿಯೋದಲ್ಲಿ ಕೊಹ್ಲಿ ಕೊಹ್ಲಿ ಎಂದು ಕೂಗಿರುವುದು ಮಾತ್ರ ಕೇಳಿಸುತ್ತಿದೆ ಎಂದು ಹೇಳಿವೆ.
ಇದನ್ನೂ ಓದಿ : ‘ಉದಯನಿಧಿ ತಲೆ ಕಡಿದ್ರೆ ₹10 ಕೋಟಿ, ಇಲ್ಲದಿದ್ರೆ ನಾನೇ ಕಡೀತೀನಿ’
ಇದೇ ವಿಷಯದ ಕುರಿತು ಟ್ವೀಟ್ ಮಾಡಿರುವ ಗಂಭೀರ್, ‘ಸತ್ಯ ತನ್ನ ಬೂಟು ಹಾಕಿಕೊಳ್ಳುವ ಹೊತ್ತಿಗೆ ಸುಳ್ಳು ಅರ್ಧ ಜಗತ್ತು ಸುತ್ತಿರುತ್ತದೆ. ಎಲ್ಲವೂ ಅಂದುಕೊಂಡಂತೆ ಇರುವುದಿಲ್ಲ. ನಮ್ಮ ರಾಷ್ಟ್ರದ ವಿರುದ್ಧದ ಘೋಷಣೆಗಳಿಗೆ ಯಾವುದೇ ಭಾರತೀಯ ಹೇಗೆ ಪ್ರತಿಕ್ರಿಯಿಸುತ್ತಾರೋ, ಅದೇ ರೀತಿ ನಾನು ಪ್ರತಿಕ್ರಿಯಿಸಿದ್ದೇನೆ. ನಾನು ನಮ್ಮ ಆಟಗಾರರನ್ನು ಪ್ರೀತಿಸುತ್ತೇನೆ, ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಗಂಭೀರ್ ದೆಹಲಿಯ ಬಿಜೆಪಿ ಸಂಸದರಾಗಿರುವುದರಿಂದ ಅವರ ವರ್ತನೆಯನ್ನು ರಾಜಕೀಯ ನಾಯಕರು ಕೂಡ ಟೀಕಿಸಿದ್ದಾರೆ. ವೈರಲ್ ವಿಡಿಯೋ ಹಂಚಿಕೊಂಡಿರುವ ಯುವ ಕಾಂಗ್ರೆಸ್ ನ ರಾಷ್ಟೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ‘ಬಿಜೆಪಿ ಸಂಸದ ಗೌತಮ್ ಗಂಭೀರ್ ಪ್ರಸ್ತುತಪಡಿಸುತ್ತಿದ್ದಾರೆ’ ಶೀರ್ಷಿಕೆ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ್ ವರ್ತನೆಯ ಪರ-ವಿರೋಧ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ.
ಇತ್ತೀಚಿಗೆ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆದಾಗ ಮೈದಾನದಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನದ ಆಟಗಾರರ ಜೊತೆ ಅನ್ಯೋನ್ಯವಾಗಿ ಕಾಣಿಸಿಕೊಂಡಿದ್ದರು. ಇದನ್ನು ಖಂಡಿಸಿದ್ದ ಗಂಭೀರ್, ನಿಮ್ಮ ಆತ್ಮೀಯತೆ ಮೈದಾನದಿಂದ ಹೊರಗಡೆ ಇಟ್ಟುಕೊಳ್ಳಿ ಎಂದಿದ್ದರು. ಗಂಭೀರ್ ಅವರ ಈ ಹೇಳಿಕೆಯೂ ಟೀಕೆಗೆ ಕಾರಣವಾಗಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.