ನವದೆಹಲಿ : ‘ಶೋಭಾ ಯಾತ್ರೆ ಬದಲು ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ’ ಎಂದು ಹಿಂದುತ್ವ ಸಂಘಟನೆಗಳ ಮುಖಂಡರಿಗೆ ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಮನವಿ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಭಾರೀ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ನೂಹ್ ನಗರದಲ್ಲಿ ಇಂದು (ಆಗಸ್ಟ್ 28) ಸರ್ವಜಾತಿಯ ಹಿಂದೂ ಮಹಾಪಂಚಾಯತ್ ಬ್ರಿಜ್ ಮಂಡಲ್ ಶೋಭಾಯಾತ್ರೆ ನಡೆಸಲು ಸಿದ್ಧತೆ ಮಾಡಿದೆ. ಆದರೆ, ನಗರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸರು ಯಾತ್ರೆಗೆ ಅವಕಾಶ ನಿರಾಕರಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಬ್ರಿಜ್ ಮಂಡಲ್ ಶೋಭಾಯಾತ್ರೆಗೆ ಯಾವುದೇ ಅನುಮತಿಯ ಅಗತ್ಯವಿಲ್ಲ ಎಂದು ಹೇಳಿದೆ. ನಾವು ನಿಗದಿಯಂತೆ ಆಗಸ್ಟ್ 28ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಯಾತ್ರೆ ನಡೆಸುತ್ತೇವೆ. ಜಲ ಅಭಿಷೇಕ ಯಾತ್ರೆ ಕೂಡ ನಡೆಯಲಿದೆ. ಇದು ತೀರ್ಥಯಾತ್ರೆಯಾಗಿರುವುದರಿಂದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ವಿಹೆಚ್‌ಪಿ ನಾಯಕ ವಿನೋದ್ ಬನ್ಸಾಲ್ ಹೇಳಿದ್ದಾರೆ.
ಇದನ್ನೂ ಓದಿ : ದೆಹಲಿಯ 5 ಮೆಟ್ರೋ ನಿಲ್ದಾಣಗಳಲ್ಲಿ ‘ಖಲಿಸ್ತಾನ್’ ಪರ ಘೋಷಣೆ ಬರೆದ ಸಿಖ್ ಉಗ್ರರು!
ನೂಹ್ ನಗರದಲ್ಲಿ ಜುಲೈ 3ರಂದು ಕೋಮು ಹಿಂಸಾಚಾರ ನಡೆದಿತ್ತು. ಈ ಗಲಭೆಯಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ- ಪಾಸ್ತಿಗಳಿಗೆ ಹಾನಿಯಾಗಿವೆ. ಗಲಭೆಯ ಹಿನ್ನೆಲೆ ಜಿಲ್ಲೆಯಲ್ಲಿ 5 ದಿನಗಳ ಕಾಲ ಕರ್ಫ್ಯೂ ವಿಧಿಸಲಾಗಿತ್ತು. ಈಗಲೂ ಜಿಲ್ಲೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.