ಚಿಕ್ಕೋಡಿ : ಬಿಜೆಪಿ ಪಕ್ಷಕ್ಕೆ ಮರಳಿ ಹೋಗುವುದು ಹುಡುಗಾಟವಲ್ಲ, ಇದು ರಾಜಕೀಯ, ಯಾರು ಎಲ್ಲಿಯೂ ಹೋಗುವುದಿಲ್ಲ ಎಲ್ಲರೂ ಕಾಂಗ್ರೆಸ್ ಪಕ್ಷದೊಂದಿಗೆ ದೃಢವಾಗಿರುತ್ತಾರೆ. ಬಿಜೆಪಿ ಪಕ್ಷಕ್ಕೆ ಆಗಿರುವ ಹೀನಾಯ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ, ಅದಕ್ಕಾಗಿ ಹೀಗೆ ಹೇಳುತ್ತಿದ್ದಾರೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಲೇವಡಿ ಮಾಡಿದ್ದಾರೆ.
ಕಾಗವಾಡ ಮತಕ್ಷೇತ್ರದ ಸಂಬರಗಿಯಲ್ಲಿಂದು ಮಾತನಾಡಿದ ಅವರು, ಬಿಜೆಪಿಗೆ ನಾವು ಹೋಗುವುದು ಇದೆಲ್ಲ ಉಹಾಪೋಹವಾಗಿದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪೂರ್ಣ ಬಹುಮತದಲ್ಲಿ ಅಧಿಕಾರಕ್ಕೆ ಬಂದಿರುವ ಸಮಯದಲ್ಲಿ ಬಿಜೆಪಿಗೆ ಹೋಗುವವರು ಹುಚ್ಚರಲ್ಲ ಎಂದು ಬಿಜೆಪಿಗೆ ತೀಕ್ಷ್ಣ ಮಾತಿನೇಟು ನೀಡಿದರು.


ಈಗಾಗಲೇ ಅದೇ ಬಿಜೆಪಿಯ 10ರಿಂದ 15 ಶಾಸಕರು ಕಾಂಗ್ರೆಸ್ ಸೇರಲು ಒಲವನ್ನು ತೋರಿಸಿದ್ದಾರೆಂಬ ಸುದ್ದಿ ಮಾಧ್ಯಮಗಳಿಂದ ಗಮನಿಸಿದ್ದೇನೆ ಇಂಥ ಸಂದರ್ಭದಲ್ಲಿ ಬಿಜೆಪಿ ಸೇರುವುದು ಅಪ್ರಸ್ತುತವಾಗಿದೆ ಎಂದು ಆಪರೇಷನ್ ಹಸ್ತದ ಸುಳಿವು ಬಿಟ್ಟುಕೊಟ್ಟ ಅವರು, ಹಗಲು ನೋಡಿರುವ ಬಾವಿಗೆ ರಾತ್ರಿ ಹೊತ್ತಲ್ಲಿ ಯಾರಾದರೂ ಬೀಳ್ತಾರಾ? ಎನ್ನುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ : ಬಿಜೆಪಿ ಪ್ರತಿಭಟನೆಗೆ ಮಣಿಯಿತಾ ಸರ್ಕಾರ? : ಸಂಜೆಯೊಳಗೆ ತಮಿಳುನಾಡಿಗೆ ಕಾವೇರಿ ನೀರು ಬಂದ್
ನಿನ್ನೆಯಷ್ಟೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೇ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ತೊರೆದಿರುವ ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಅವರನ್ನು ಮರಳಿ ಮನೆಗೆ ಆಹ್ವಾನಿಸಿದ್ದರು. ಇದರ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ಶಾಸಕ ಕಾಗೆ, ಬಿಜೆಪಿಗೆ ಹೋಗಲು ಯಾರು ಬಯಸುವುದಿಲ್ಲ ಎಂದು ಕೇಂದ್ರ ಸಚಿವೆಯ ಆಹ್ವಾನವನ್ನು ಅಲ್ಲಗಳೆದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.