ಚಿತ್ರದುರ್ಗ: ಬಿಜೆಪಿಯಲ್ಲಿ ಉಸಿರುಗಟ್ಟಿದ ವಾತಾವರಣದಲ್ಲಿ ಐದು ವರ್ಷ ಕಳೆದಿದ್ದೇನೆ. ಈ ಬಾರಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಲು ನನ್ನ ಖಾಯಂ ಮನೆಯಾದ ಕಾಂಗ್ರೆಸ್‌ಗೆ ಮರಳಲಿದ್ದೇನೆಎಂದು ಕೂಡ್ಲಿಗಿ ಮಾಜಿ ಶಾಸಕ ಎನ್‌ವೈ ಗೋಪಾಲಕೃಷ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ನನ್ನ ಬಾಡಿಗೆ ಮನೆಯಾಗಿದ್ದು, ಸ್ವಂತಮನೆಯಾದ ಕಾಂಗ್ರೆಸ್‌ಗೆ ತೆರಳಲು ರೆಡಿಯಾಗುತ್ತಿದ್ದೇನೆ, ನಾನು ಕೂಡಾ ಲೋಕಲ್ ಅಭ್ಯರ್ಥಿ, ಹುಟ್ಟಿದಾಗಿನಿಂದ ಇದೇ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬೆಳೆದಿದ್ದೇನೆ. ಅನಿವಾರ್ಯವಾಗಿ ಬೇರೆ ಕ್ಷೇತ್ರಕ್ಕೆ ಹೋಗಿದ್ದೆ. ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಅಂದಹಾಗೆ ಎನ್.ವೈ ಗೋಪಾಲಕೃಷ್ಣ ಒಟ್ಟು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ನಾಲ್ಕು ಬಾರಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಬಳ್ಳಾರಿ ಹಾಗೂ ಕೂಡ್ಲಿಗಿ ಕ್ಷೇತ್ರದಿಂದ ಒಂದೊಂದು ಬಾರಿ ಜಯಗಳಿಸಿದ್ದರು.
1993ರಿಂದ 2013 ವರೆಗೆ ಮೊಳಕಾಲ್ಮೂರು ಕ್ಷೇತ್ರದಿಂದ ಜಯಗಳಿಸಿದ್ದರು. ಇನ್ನು 2014ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ನಂತರ ಕಳೆದ ವಿಧಾನಸಭಾ ಚುನಾವಣೆ ಅಂದರೆ 2018ರಲ್ಲಿ ಬಿಜೆಪಿ ಸೇರಿ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.