ಮಂಡ್ಯ : ಕಾವೇರಿ ಹೆಸರು ಹೇಳಿ ಅಧಿಕಾರಕ್ಕೆ ಬಂದ ಸರ್ಕಾರ ಜವಾಬ್ದಾರಿ ಮರೆತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಂಡ್ಯದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಈ ಸರ್ಕಾರಕ್ಕೆ ತಮಿಳುನಾಡಿಗೆ ನೀರು ಕೊಡುವುದಷ್ಟೇ ಉದ್ದೇಶ. ರಾತ್ರಿ 10 ಸಾವಿರ ಬೆಳಿಗ್ಗೆ 5 ಸಾವಿರ ಕ್ಯೂಸೆಕ್ ಬಿಡ್ತಿದ್ದಾರೆ, ನಮ್ಮ ರೈತರು ಸಂಕಷ್ಟದಲ್ಲಿದ್ದಾರೆ, ಮಳೆ ಕಡಿಮೆಯಾಗುವ ಬಗ್ಗೆ ಮಾಹಿತಿ ಇದ್ದರೂ ಕೆರೆ, ಕಟ್ಟೆ ತುಂಬಿಸುವ ಕೆಲಸ ಮಾಡಲಿಲ್ಲ ಎಂದು ಆಕ್ರೋಶಿಸಿದರು.
ಪ್ರಾಧಿಕಾರಕ್ಕೆ ಮನವರಿಕೆ ಮಾಡುವಲ್ಲಿಯೂ ವಿಫಲವಾಗಿದೆ, ಕಾಟಾಚಾರಕ್ಕೆ ಸರ್ವಪಕ್ಷ ಸಭೆ ಕರೆದರೂ, ಪ್ರಚಾರ ಕಾರ್ಯದಲ್ಲಷ್ಟೇ ಸರ್ಕಾರ ಮುಳುಗಿದೆ, ಡಿಸೆಂಬರ್ ಬಳಿಕ ಕುಡಿಯಲು ನೀರು ಸಿಗುವುದಿಲ್ಲ, ತಮಿಳುನಾಡಿಗೆ ಉತ್ತಮ ಮಳೆಯಾಗುವ ಅವಕಾಶ ಇದೆ, ಕರ್ನಾಟಕಕ್ಕೆ ಮಳೆ ಸಾಧ್ಯತೆ ಕಡಿಮೆ ಎಂದು ಬೇಸರಿಸಿದರು.
ಈ ಸರ್ಕಾರವೇ ಮೇಲೆ ಬಿದ್ದು ನೀರು ಬಿಡುವುದಾಗಿ ಹೇಳ್ತಿದೆ, 5 ಸಾವಿರಕ್ಕೂ ಹೆಚ್ಚು ನೀರು ಬಿಡ್ತಿದ್ದಾರೆ, ರಾತ್ರಿ 5 ಸಾವಿರ ಬೆಳಿಗ್ಗೆ 10 ಸಾವಿರ ಕ್ಯೂಸೆಕ್ ಬಿಡ್ತಿದ್ದಾರೆ, ತಮಿಳುನಾಡು ಓಲೈಸಿಕೊಳ್ಳುವ ಕೆಲಸ ಸರ್ಕಾರ ಮಾಡ್ತಿದೆ ಎಂದು ಕಿಡಿಕಾರಿದರು. ತಮಿಳುನಾಡು ವಿಸ್ತೀರ್ಣ ಹೆಚ್ಚಿಗೆ ಮಾಡಿರುವ ಬಗ್ಗೆ ಚಕಾರ ಎತ್ತುತ್ತಿಲ್ಲ, ಈ ಭಾಗದ ಶಾಸಕರು ರಾಜೀನಾಮೆ ಕೊಟ್ಟು ಹೋರಾಡಲಿ, ರೋಡಲ್ಲಿ ನಿಂತು ರೆಕಾರ್ಡ್ ಮಾಡಿ ಹೇಳಿಕೆ ಬಿಡುವುದಲ್ಲ, ಸಿಎಂ ಬಳಿ ಹೋಗಿ ಟೇಬಲ್ ಕುಟ್ಟಿ ನ್ಯಾಯ ಕೇಳಬೇಕು. ಶಾಸಕರು ರಾಜಿನಾಮೆ ಕೊಟ್ಟು ಹೋರಾಟಕ್ಕಿಳಿಯಬೇಕು ಎಂದು ಆಗ್ರಹಿಸಿದರು.
ಮೇಕೆದಾಟು ಹೋರಾಟ ಮೇ ದಾಟಾಗಿದೆ. ಮತ್ತೆ ಡಿಸೆಂಬರ್‌ಗೆ ಬರ್ತಾರೆ, 2028ಕ್ಕೆ ನೋಡಿಕೊಳ್ತಾರೆ ಎಂದು ವ್ಯಂಗ್ಯವಾಡಿದರು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಭರ್ಜರಿ ಮಳೆಯಾಗಿತ್ತು, ಉಸ್ತುವಾರಿ ಸಚಿವನಿಗೆ ಒಂದು ಟಿಎಂಸಿಗೆ ಎಷ್ಟು ನೀರು ಅನ್ನೋ ಲೆಕ್ಕ ಗೊತ್ತಿಲ್ಲ. ಆದರೆ ಎಲ್ಲೆಲ್ಲಿ ಎಷ್ಟೆಷ್ಟು ಕಮಿಷನ್ ತಗೋಬೇಕು ಚೆನ್ನಾಗಿ ಗೊತ್ತಿದೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ವಾಗ್ದಾಳಿ ನಡೆಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.