ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ 60 ವರ್ಷ ಕಾಂಗ್ರೆಸ್ ಅವರು ಆಡಳಿತ ಮಾಡಿ ಪಾಪದ ರಾಶಿ ಹಾಕಿದರು. ಈಗ ಅದನ್ನು ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಯಾವತ್ತು ಸತ್ಯ ಹೇಳಿಲ್ಲ. ಅವರು ಸತ್ಯ ಹೇಳಿದ ದಿನವೇ ಕಾಂಗ್ರೆಸ್ ಸಾಯುತ್ತದೆ ಎಂದು ಹೇಳಿದರು. ಪೊರಕೆ ಹಿಡಿದುಕೊಂಡು ಕ್ಲೀನ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಈಗ ಪ್ರಾಯಶ್ಚಿತ್ತ ಆಗಿದೆ. ಅದಕ್ಕೆ ಈ ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದೆ ಅವರಿಗೆ ಶಾಶ್ವತವಾಗಿ ಕಸ ಗುಡಿಸುವ ಕೆಲಸ ಖಾಯಂ ಆಗಿ ಇರುತ್ತದೆ ಎಂದು ಕಿಡಿಕಾರಿದರು.
ಈಗಾಗಲೇ ಪ್ರಧಾನಿ ಮೋದಿ ಅವರು 10 ಕೆ.ಜಿ ಅಕ್ಕಿ ಕೊಡುತ್ತಿದ್ದಾರೆ. ಆಹಾರ ಭದ್ರತೆ ಯೋಜನೆ ಅಡಿ ಮತ್ತು ಗರೀಬಿ ಕಲ್ಯಾಣ ಯೋಜನೆ ಅಡಿ 10 ಕೆ.ಜಿ ಅಕ್ಕಿ ಕೊಡುತ್ತಿದ್ದಾರೆ. ಕಾಂಗ್ರೆಸ್ ಅವರು ಈಗ ಮತ್ತೆ 10 ಕೆ.ಜಿ ಅಕ್ಕಿ ಎಲ್ಲಿಂದ ಕೊಡುತ್ತಾರೆ ಎಂದು ಪ್ರಶ್ನೆ ಮಾಡಿದರು.ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ ನೀಡುತ್ತಿದ್ದ ಅಕ್ಕಿ ಮೋದಿ ಸರ್ಕಾರದ್ದಾಗಿತ್ತು. ಅಕ್ಕಿ ಚೀಲದ ಮೇಲೆ ಸಿದ್ದರಾಮಯ್ಯ ಫೋಟೋ ಇತ್ತು ಅಷ್ಟೆ. ಕಾಂಗ್ರೆಸ್ ಅವರು ಯಾವತ್ತು ಸತ್ಯ ಹೇಳಿಲ್ಲ.