ಬೆಂಗಳೂರು: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್-ರೇವತಿ ದಂಪತಿಯ ಪುತ್ರ ಆವ್ಯಾನ್ ದೇವ್‌ಗೆ ಮೊದಲನೇ ವರ್ಷದ ಹುಟ್ಟುಹಬ್ಬ ಆಚರಿಸಲಾಯಿತು. ಹುಟ್ಟುಹಬ್ಬದ ಪ್ರಯುಕ್ತ ರಾಮನಗರದ ಚಾಮುಂಡೇಶ್ವರಿಗೆ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಇದೇ ವೇಳೆ ಜೆಡಿಎಸ್ ಕಾರ್ಯಕರ್ತರ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಅವ್ಯಾನ್ ದೇವ್ ಕೈಯಲ್ಲಿ ಕೇಕ್ ಕಟ್ ಮಾಡಿಸುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನನ್ನ ಮಗ ಹುಟ್ಟಿ ಇಂದಿಗೆ ಒಂದು ವರ್ಷ ಪೂರೈಸಿದೆ. ತಂದೆ ತಾಯಿ ನಂಬಿರುವ ದೇವಿಯ ಕೃಪೆಗೆ ಬಂದಿದ್ದೇನೆ. ರಾಮನಗರದ ಶ್ರೀ ಚಾಮುಂಡೇಶ್ವರಿ ತಾಯಿಯ ಆಶಿರ್ವಾದಕ್ಕಾಗಿ ಮಗನ ಜೊತೆ ಆಗಮಿಸಿದ್ದೇವೆ. ನಾನು ಏನು ವಿಶೇಷವಾಗಿ ಏನು ಕೇಳಿಕೊಂಡಿಲ್ಲ. ನನ್ನ ತಾತ, ತಂದೆ ತಾಯಿ ಮಾಡಿರುವಂತೆ ಜನ ಸೇವೆ ಮಾಡಬೇಕು. ಜನರ ಸೇವೆಯಲ್ಲಿಯೇ ದೇವರನ್ನು ಕಾಣಬೇಕು ಎಂದು ಹೇಳಿದರು.
ಜನ ಸೇವೆ ಮಾಡುವುದಕ್ಕೆ ನಮ್ಮ ಜೀವನ ಮೀಸಲಿಡಬೇಕಿದೆ. ಇದು ನಮ್ಮ ತಂದೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ನಮ್ಮ ತಾತ ಮಾಜಿ ಪ್ರಧಾನಿ ದೇವೇಗೌಡರ ಆಶಯ. ಅವರ ಆಶಯದಂತೆ ನಾವುಗಳು ನಡೆಯುತ್ತಿದ್ದೇವೆ ಎಂದರು. ನಂತರ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರ ನಿವಾಸದಲ್ಲಿ ಕೇಕ್ ಕತ್ತರಿಸಿ ಆವ್ಯಾನ್ ದೇವ್ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಹೆಚ್.ಡಿ. ದೇವೇಗೌಡರು ಮತ್ತು ಪತ್ನಿ ಚೆನ್ನಮ್ಮ ಮರಿ ಮೊಮ್ಮಗನನ್ನು ಆಶೀರ್ವದಿಸಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರ ನಿವಾಸದಲ್ಲಿಯೂ ಕೇಕ್ ಕತ್ತರಿಸಿ ಮೊಮ್ಮಗನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು.