ಮೈಸೂರು: ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಘೋಷಣೆ ಮಾಡುವಾಗ ಯಾವುದೇ ಷರತ್ತುಗಳ ಬಗ್ಗೆ ಉಲ್ಲೇಖಿಸಿರಲಿಲ್ಲ. ಗ್ಯಾರಂಟಿಗಳ ಜಾರಿಗಾಗಿ ಜೂನ್ 1ರವರೆಗೆ ಕಾಯುತ್ತೇವೆ. ಷರತ್ತುಗಳು ಇಲ್ಲದೆ ಗ್ಯಾರಂಟಿಗಳನ್ನು ಜಾರಿಮಾಡಬೇಕು. ಒಂದು ವೇಳೆ ಷರತ್ತು ವಿಧಿಸಿದರೆ ಜೂನ್ 1ರಿಂದ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಕಾರ್ಡ್ ವಿಚಾರದಲ್ಲಿ ಬಿಜೆಪಿ ಎಚ್ಚೆತ್ತುಕೊಂಡಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು. ಇನ್ನು ಈ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರಲ್ಲ. ದೇಶಕ್ಕೆ ಎಂತಹ ನಾಯಕ ಬೇಕು ಅನ್ನೋದು ಕನ್ನಡಿಗರಿಗೆ ಗೊತ್ತು. ಆದಾಯದ ಆಧಾರದ ಮೇಲೆ ಖರ್ಚು ಮಾಡಬೇಕು ಎಂಬ ನಿಯಮ ವಿಧಾನಸಭೆಯಲ್ಲಿ ಇದೆ. ವಿತ್ತಿಯ ಹೊಣೆಗಾರಿಕೆ ಬಿಲ್ ಕರ್ನಾಟಕದಲ್ಲಿ ಪಾಸ್ ಆಗಿದೆ. ಮುಂದಿನ ತಲೆಮಾರನ್ನು ಅಪಾಯಕ್ಕೆ ತಳ್ಳಬೇಡಿ. ಗ್ಯಾರಂಟಿ ಕಾರ್ಡ್ ಅಲ್ಲಿ ಕಂಡೀಷನ್ ಅಪ್ಲೈ ಅಂತಾ ಎಲ್ಲೂ ಹಾಕಿಲ್ಲ. ಎಲ್ಲಾ ಮನೆಯ ಯಜಮಾನಿಗೆ 2 ಸಾವಿರ ಕೊಡಬೇಕು. ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಯಣಕ್ಕೆ ಅವಕಾಶ ಕೊಡಬೇಕು. ಜೂನ್ 1 ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಕಟ್ಟಬೇಡಿ. 200 ಯೂನಿಟ್ ಮೇಲೆ ಎಷ್ಟು ಯೂನಿಟ್ ಬಳಸುತ್ತಿರಾ ಹೆಚ್ಚುವರಿಗೆ ಮಾತ್ರ ಕಟ್ಟಿ. ಕಂಡೀಷನ್ ಹಾಕಿದರೆ ಜೂನ್ 1 ರಿಂದ ಹೋರಾಟ ಮಾಡುತ್ತೇವೆ ಎಂದು ಕಿಡಿಕಾರಿದರು.
ಇನ್ನು ಮುಂದುವರೆದು ಮಾತನಾಡಿದ ಅವರು, ನಿಮ್ಮ ಮುಖ ನೋಡಿ ಮತ ಹಾಕಿಲ್ಲ, ಗ್ಯಾರಂಟಿ ಕಾರ್ಡ್ ನೋಡಿ ಮತ ಹಾಕಿದ್ದಾರೆ ಅದು ನೆನಪಿರಲಿ. ನಾವು ಸೋತಿದ್ದೇವೆ, ಹೊರತು ಸತ್ತಿಲ್ಲ. ಕೊಟ್ಟ ಭರವಸೆ ಈಡೇರಿಸಿ. ರಾಜಸ್ಥಾನದಲ್ಲಿ ಇದೇ ರೀತಿ ಹೇಳಿ ಇವತ್ತಿನವರೆಗೆ ಮಾಡಿಲ್ಲ. ಸಿದ್ದರಾಮಯ್ಯ ಅಥವಾ ನಾನು ಯಾರೂ ಆರ್ಥಿಕ ತಜ್ಞರಲ್ಲ. ಸಿಎಂ ಕುರ್ಚಿ ಅನ್ನೋದು ಯಾರ ಸ್ವತ್ತಲ್ಲ. ಆದರೆ ಪೊಲೀಸ್ ವ್ಯವಸ್ಥೆ ಅನ್ನೋದು ಶಾಶ್ವತ ಇರುತ್ತದೆ. ವಿಧಾನಸೌಧದದಲ್ಲಿ ಕೂತು ಪೊಲೀಸ್ ಇಲಾಖೆಗೆ ಧಮ್ಕಿ ಹಾಕುತ್ತೀರಾ ಎಂದು ಪ್ರಶ್ನಿಸಿದರು.