ಗಾಂಧಿನಗರ: ಗುಜರಾತ್ ವಿಧಾನಸಭೆ ಚುನಾವಣೆ ಅಖಾಡಕ್ಕೆ ಪ್ರಧಾನಿ ನರೇಂದ್ರ ಮೋದಿ ಇಳಿಯಲಿದ್ದಾರೆ. ಸರಿ ಸುಮಾರು 15 ದಿನಗಳಲ್ಲಿ ಅವರು 40ಕ್ಕೂ ಅಧಿಕ ಬೃಹತ್ ರ‍್ಯಾಲಿಗಳನ್ನು ನಡೆಸಲಿದ್ದಾರೆ. ಜಾತಿ ಮತ್ತು ಸಮುದಾಯ ಸಮೀಕರಣಗಳ ಲೆಕ್ಕಾಚಾರದಲ್ಲಿ ಚುನಾವಣೆ ನಡೆಸುತ್ತಿರುವ ಬಿಜೆಪಿ ನರೇಂದ್ರ ಮೋದಿ ಪ್ರತಿ ರ‍್ಯಾಲಿಯಲ್ಲಿ 4-5 ವಿಧಾನಸಭೆ ಕ್ಷೇತ್ರಗಳು ಒಳಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗಿದೆ.
ದುರ್ಬಲ ಕ್ಷೇತ್ರಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಗೆಲುವುಗಾಗಿ ಇಲ್ಲಿ ಪ್ರಚಾರ ಕಾರ್ಯ ಹೆಚ್ಚಲಿದೆ. ದುರ್ಬಲ ಕ್ಷೇತ್ರಗಳ ಮೇಲೆ ಗೃಹ ಸಚಿವ ಅಮಿತ್ ಶಾ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇಂದ್ರಿಕರಿಸಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, ನವೆಂಬರ್ 15 ರಿಂದ ರ‍್ಯಾಲಿಗಳನ್ನು ಆರಂಭಿಸಲಿದ್ದಾರೆ. 12-15 ದಿನಗಳಲ್ಲಿ ಮೋದಿ 40 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪಕ್ಷದ ರಾಷ್ಟ್ರೀಯ ನಾಯಕರು, ಟಿವಿ, ಸಿನಿಮಾ ನಟರು, ಸ್ಟಾರ್ ಪ್ರಚಾರಕರ ದಂಡು ಬಿಜೆಪಿ ಪರ ಮತಯಾಚನೆ ಮಾಡಲಿದೆ. ಈ ಮೂಲಕ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಮೂಲಕ ಗೆಲುವಿನ ದಡ ಸೇರುವ ನಿರೀಕ್ಷೆಯಲ್ಲಿದೆ.
ಬಹುತೇಕ ಟಿಕೆಟ್ ಹಂಚಿಕೆ ಕಾರ್ಯ ಮಕ್ತಾಯಗೊಂಡಿದ್ದು, ಕಡೆಯ 22 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಭಾನುವಾರದೊಳಗೆ ಅಂತಿಮ ಪಟ್ಟಿಯೂ ಬಿಡುಗಡೆಯಾಗಬಹುದು ಎಂದು ಮೂಲಗಳು ಹೇಳಿವೆ.