Thursday, September 28, 2023
spot_img
- Advertisement -spot_img

ದಸರಾ ಉದ್ಘಾಟನೆಗೆ ಹಂಸಲೇಖ : ಸಿಎಂ ಸಿದ್ದರಾಮಯ್ಯ ಘೋಷಣೆ

ಮೈಸೂರು : ಈ ಬಾರಿ ನಾಡಹಬ್ಬ ದಸರಾವನ್ನು ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟನೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಅವರು, ಅಕ್ಟೋಬರ್ 15ರಂದು ಬೆಳಿಗ್ಗೆ 10:15ರಿಂದ 10.30ಕ್ಕೆ ಸಲ್ಲುವ ಶುಭ ಮುಹೂರ್ತದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಹಂಸಲೇಖ ದಸರಾ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ, ವಿಜಯದಶಮಿ ದಿನದಂದು ಪಂಜಿನ ಕವಾಯತು ನಡೆಯಲಿದೆ. ಈ ಬಾರಿ ಅದ್ದೂರಿ ದಸರಾ ಆಚರಣೆ ಮಾಡುವುದಾಗಿ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ.

ದಸರಾ ಮಹೋತ್ಸವಕ್ಕೆ ಪ್ರತಿ ವರ್ಷದಂತೆ ಈ ಬಾರಿಯೂ ಮೈಸೂರು ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುವುದು. ಎಲ್ಲಾ ಧಾರ್ಮಿಕ ಆಚರಣೆಗಳು ಅದ್ದೂರಿಯಾಗಿ ನಡೆಯಲಿವೆ. ಈ ಬಾರಿ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳನ್ನು ಬಿಂಬಿಸುವ ಸ್ಥಬ್ದ ಚಿತ್ರಗಳು ಜಂಬೂಸವಾರಿಯ ವೇಳೆ ವಿಶೇಷ ಆಕರ್ಷಣೆಯಾಗಿ ಇರಲಿದೆ ಎಂದು ಸಿಎಂ ಹೇಳಿದ್ದಾರೆ.

ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಹಂಸಲೇಖ ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆಯಾಗಿರುವ ಖ್ಯಾತ ಸಂಗೀತ ನಿರ್ದೇಶಕರಾದ ನಾದ ಬ್ರಹ್ಮ ಶ್ರೀ ಹಂಸಲೇಖ ಅವರಿಗೆ ಹಾರ್ದಿಕ ಅಭಿನಂದನೆಗಳು. ಈ ಬಾರಿಯ ದಸರಾ ಇನ್ನಷ್ಟು ನಾದಮಯವಾಗಲಿ, ಸಂಸ್ಕೃತಿಗಳ ಸಮಾಗಮವಾಗಲಿ ಎಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿ ಹಂಸಲೇಖ ಅವರಿಗೆ ಅಭಿನಂದನೆ ತಿಳಿಸಿದ್ದು, ನಾಡ ಹಬ್ಬ ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಸಂಗೀತ ಮಾಂತ್ರಿಕ, ನಾದಬ್ರಹ್ಮ ಹಂಸಲೇಖ ಅವರಿಗೆ ಅಭಿನಂದನೆಗಳು. ಸಂಗೀತದಲ್ಲಿ ಮಾಂತ್ರಿಕತೆಯನ್ನು ಸೃಷ್ಟಿಸಿ ಜನಮನದಲ್ಲಿ ಬೇರೂರಿರಿರುವ ಹಂಸಲೇಖ ಅವರು ಪ್ರಗತಿಪರ ಚಿಂತನೆಗಳ ಮೂಲಕ ನಾಡಿನ ಸಾಕ್ಷಿಪ್ರಜ್ಞೆಯಾಗಿ ನಿಂತಿದ್ದಾರೆ. ಕನ್ನಡಮ್ಮನ ನೆಚ್ಚಿನ ಮಗನಿಂದ ದಸರಾ ಉದ್ಘಾಟನೆಯಾಗುತ್ತಿರುವುದು ಕರ್ನಾಟಕಕ್ಕೆ ಹೆಮ್ಮೆ ತರುವ ಸಂಗತಿ ಎಂದಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles