ಮುಂಬೈ: ಮಕ್ಕಳ ಹಾದಿ ತಪ್ಪಿಸುತ್ತಿರುವ ಡೇಟಿಂಗ್ ಅಪ್ಲಿಕೇಶನ್‌ಗಳ ಮೇಲೆ ಆದಷ್ಟು ನಿರ್ಬಂಧ ಹೇರಬೇಕು. 18 ವರ್ಷ ಮೇಲ್ಪಟ್ಟ ಮಕ್ಕಳನ್ನು ಪೋಷಕರು ಸ್ವಲ್ಪಮಟ್ಟಿಗೆ ನಿಯಂತ್ರಿಸಬೇಕು ಎಂದು ದೆಹಲಿಯಲ್ಲಿ ಭೀಕರವಾಗಿ ಹತ್ಯೆಯಾದ ಯುವತಿ ಶ್ರದ್ಧಾ ವಾಕರ್ ತಂದೆ ವಿಕಾಸ್ ವಾಕರ್ ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ಮಗಳನ್ನು ಕೊಂದ ಅಫ್ತಾಬ್ ಪೂನಾವಾಲಾನಿಗೆ ಗಲ್ಲು ಶಿಕ್ಷೆ ನೀಡಿ. ಆತನ ಪೋಷಕರಿಗೂ ಕಠಿಣ ಶಿಕ್ಷೆ ನೀಡಿ ಎಂದು ಒತ್ತಾಯಿಸಿದ್ದಾರೆ. ಶ್ರದ್ಧಾ ಮನೆ ಬಿಟ್ಟು ಹೋಗುವುದಕ್ಕೂ ಮೊದಲು ನಾನು ಮಗುವಲ್ಲ, ನಾನು ವಯಸ್ಕಳು ಎಂದು ಹೇಳಿದ್ದಳು. ಆಕೆ ಹೊರಟು ಹೋದ ಮೇಲೆ ನಾನು ಆಕೆಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದೆ. ಕಳೆದ 2 ವರ್ಷ ನನ್ನ ಕರೆಗಳಿಗೆ ಆಕೆ ಪ್ರತಿಕ್ರಿಯೆಯನ್ನೇ ನೀಡಿಲ್ಲ. ಆಕೆಯ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ಆಕೆ ಎಂದಿಗೂ ಹೇಳಿಕೊಳ್ಳಲಿಲ್ಲ ಎಂದು ಭಾವನಾತ್ಮಕವಾಗಿ ವಿಕಾಸ್ ತಿಳಿಸಿದರು.
ಮಗಳನ್ನು ಕಳೆದುಕೊಂಡ ದುಃಖದಲ್ಲಿ ವಿಕಾಸ್ ವಾಕರ್, ನನ್ನ ಮಗಳನ್ನು ಕೊಂದ ಅಫ್ತಾಬ್‌ಗೆ ಗಲ್ಲು ಶಿಕ್ಷೆಯಾಗಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಯಾರೇ ಆದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಶ್ರದ್ಧಾ ಅಫ್ತಾಬ್ ಬಗ್ಗೆ ಪೊಲೀಸರಿಗೆ ಈ ಮೊದಲೇ ದೂರು ನೀಡಿದ್ದಳು. ವಿಳಂಬಗೊಳಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಯಬೇಕು ಎಂದರು.