ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ 24 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಹೇಳಿಕೆ ನೀಡಿದ್ದಾರೆ. ಸ್ಥಳೀಯ ಸಮಾರಂಭವೊಂದರಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹೇಳಿಕೆ ಖಂಡಿಸಿ ಪುತ್ತೂರು ನಗರಸಭಾ ಸದಸ್ಯ ಮಹಮ್ಮದ್ ರಿಯಾಜ್ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೇ 22ರಂದು ನಡೆದ ಕಾರ್ಯಕ್ರಮದಲ್ಲಿ ಹರೀಶ್ ಪೂಂಜಾ ಈ ಹೇಳಿಕೆ ನೀಡಿದ್ದರು. ಆಧಾರ ರಹಿತವಾಗಿ ಹರೀಶ್ ಪೂಂಜಾ ಈ ಹೇಳಿಕೆಯನ್ನು ನೀಡಿದ್ದು, ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಕಾರ್ಯಕರ್ತ ಸತ್ಯಜಿತ್ ಸುರತ್ಕಲ್ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ಅದಕ್ಕೆ “24 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ ಸಿದ್ದರಾಮಯ್ಯನವರಿಗೆ ನೀವು ಮತ ಕೇಳಿದ್ದೀರಿ. ಭಜರಂಗದಳದ ಮೇಲೆ ನಿಷೇಧ ಹೇರಲು ಮುಂದಾಗಿರುವ ಕಾಂಗ್ರೆಸ್‌ಗೆ ಮತ ಯಾಚಿಸಿದ್ದೀರಿ. ನಿಮ್ಮದು ಯಾವ ರೀತಿಯ ಹಿಂದುತ್ವ ಎಂದು ಜನ ಕೇಳುತ್ತಿದ್ದಾರೆ” ಎಂದು ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಪೂಂಜಾ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.