ಬೆಂಗಳೂರು: ಹಾಸನ ರಾಜಕೀಯ ನನಗೆ 40 ವರ್ಷದಿಂದ ಗೊತ್ತಿದ್ದು, ಗೆಲ್ಲುವ ಅಭ್ಯರ್ಥಿ ಹಾಗೂ ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತೇವೆ, ದಯವಿಟ್ಟು ಒತ್ತಡ ತರಬೇಡಿ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದರು.
ಮುಖಂಡರ ಸಭೆ ನಡೆಸಿ ಮಾತನಾಡಿ, ನಮಗೆ ಹಾಸನ ಕ್ಷೇತ್ರ ಉಳಿಸಿಕೊಳ್ಳುವುದಷ್ಟೇ ಗುರಿ. ಹಾಸನ ಕ್ಷೇತ್ರಕ್ಕೆ ಟಿಕೆಟ್ ಯಾರಿಗೆ ಕೊಡಬೇಕು ಎನ್ನುವುದನ್ನು ನಿರ್ಧಾರ ಮಾಡುತ್ತೇನೆ. ಎಲ್ಲರೂ ಬೆಂಬಲಿಸುವಂತೆ ಸಭೆಯಲ್ಲಿ ಮನವಿ ಮಾಡಿದರು.
ಹಾಸನ ಕ್ಷೇತ್ರದಲ್ಲಿ ಪರಿಶೀಲನೆ ಮಾಡಿಯೇ ಟಿಕೆಟ್ ನೀಡುತ್ತೇವೆ. ಹೆಚ್.ಡಿ ರೇವಣ್ಣ ಹೊಳೆನರಸೀಪುರದಿಂದ ಸ್ಪರ್ಧಿಸುತ್ತಾರೆ. ಎರಡೂ ಕ್ಷೇತ್ರದಲ್ಲಿ ರೇವಣ್ಣ ಚುನಾವಣೆಗೆ ನಿಲ್ಲುವುದಿಲ್ಲ ಎಂದರು.
ಕುಮಾರಸ್ವಾಮಿ ಅವರು ಕಾರ್ಯಕರ್ತ ಸ್ವರೂಪ್‌ಗೆ ಟಿಕೆಟ್ ಕೊಡುವುದಾಗಿ ಹೇಳಿದ್ದಾರೆ. ಆದರೆ, ರೇವಣ್ಣ ಅವರು ತಮ್ಮ ಪತ್ನಿ ಭವಾನಿ ಅವರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಆಗಿರೋ ಗೊಂದಲ ಪ್ರಸ್ತಾಪ ಮಾಡಿ ದೇವೇಗೌಡರು ಕಣ್ಣೀರು ಹಾಕಿದರು.
ಕಳೆದ 40 ವರ್ಷದಿಂದ ಏನೇನಾಗಿದೆ ಎಲ್ಲವೂ ನಿಮಗೆ ಗೊತ್ತಿದೆ ಎಂದರು. ನೀವು ಕಣ್ಣಿರು ಹಾಕಬೇಡಿ ಎಂದು ಕಾರ್ಯಕರ್ತರು ಸಮಾಧಾನ ಮಾಡಿದರು. ಒಟ್ಟಿನಲ್ಲಿ ಯಾರೇ ಅಭ್ಯರ್ಥಿಯಾದರೂ ನಮ್ಮಕೆಲಸ ನಾವು ಮಾಡ್ತೇವೆ. ನಿಮ್ಮ ಮರ್ಯಾದೆ ತೆಗೆಯುವ ಕೆಲಸ ಹಾಸನ ಕಾರ್ಯಕರ್ತರಿಂದ ಆಗಲ್ಲ ಎಂದು ಭರವಸೆ ನೀಡಿದರು.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ, ಗೌಡರಿಗೆ ಆರೋಗ್ಯ ಸರಿಯಿಲ್ಲ. ಬೆಂಬಲಿಗರು ಬೇಡಿಕೆ ಇಟ್ಟಿದ್ದಾರೆ. ಸೂಕ್ತ ನಿರ್ಣಯ ಆಗುತ್ತದೆ. ಆದರೆ ಇಂತಹದ್ದೆ ನಿರ್ಣಯ ಆಗುತ್ತೆ ಎಂದು ಹೇಳೋದಕ್ಕೆ ಆಗಲ್ಲ ಎಂದು ಅಭಿಪ್ರಾಯಪಟ್ಟರು.