ಬೆಂಗಳೂರು: ಹಾಸನ ಟಿಕೆಟ್ ವಿಚಾರವಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಸಭೆ ನಡೆಯಿತು. ಆದರೆ ಸಭೆಯಿಂದ ಟಿಕೆಟ್ ಗೊಂದಲದ ಸಮಸ್ಯೆ ಪರಿಹಾರವಾಗಿಲ್ಲ, ಹಾಸನಕ್ಕೆ ಸೂಕ್ತ ಅಭ್ಯರ್ಥಿ ಯಾರೆಂದು ಇನ್ನೂ ಘೋಷಣೆಯಾಗಿಲ್ಲ,
ಭವಾನಿ ರೇವಣ್ಣ, ಸ್ವರೂಪ್ ನಡುವೆ ಟಿಕೆಟ್ ಫೈಟ್ ನಡೆಯುತ್ತಿದ್ದು, ಹೆಚ್ ಡಿ ಕುಮಾರಸ್ವಾಮಿ ಭವಾನಿರೇವಣ್ಣರಿಗೆ ಟಿಕೆಟ್ ನೀಡಲು ಅಷ್ಟಾಗಿ ಗಮನಹರಿಸ್ತಾ ಇಲ್ಲ, ಹೆಚ್ ಡಿ ದೇವೇಗೌಡರು ಯಾರಿಗೆ ಟಿಕೆಟ್ ಎಂದು ನಿರ್ಧರಿಸುತ್ತಾರೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದರು, ಪಟ್ಟಿ ಬಿಡುಗಡೆ ವೇಳೆಗೂ ಹಾಸನದ ಅಭ್ಯರ್ಥಿ ಯಾರೆಂದು ಇನ್ನೂ ಘೋಷಿಸಿಲ್ಲ,
ಒಂದು ಕಡೆ ನಾನೇ ಅಭ್ಯರ್ಥಿ ಎಂದು ಸ್ವರೂಪ್ ಓಡಾಡುತ್ತಿದ್ರೆ, ಇನ್ನೊಂದು ಕಡೆ ಭವಾನಿ ರೇವಣ್ಣ ತಮ್ಮದೇ ಸ್ಟೈಲ್ ನಲ್ಲಿ ಮನೆ ಮೆನೆಗೆ ತೆರಳಿ ಜನರ ಬೇಡಿಕೆ ಪೂರ್ಣಗೊಳಿಸೋದಾಗಿ ಭರವಸೆ ನೀಡುತ್ತಿದ್ದಾರೆ. ಟಿಕೆಟ್ ವಿಚಾರವಾಗಿ ದೊಡ್ಡಗೌಡರ ಪಕ್ಷದಲ್ಲಿ ಭಿನ್ನಮತ ಮೂಡಿದೆ. ಜೆಡಿಎಸ್ ವರಿಷ್ಠ ದೇವೇಗೌಡರ ಸಮ್ಮುಖದಲ್ಲಿ ಸಭೆ ಆಯೋಜಿಸಿದ್ದರೂ ಸಭೆ ಆರಂಭವಾದ 15 ನಿಮಿಷದಲ್ಲೇ ಭವಾನಿ ರೇವಣ್ಣ ನಿರ್ಗಮಿಸಿದರು.
ಇದಾದ ಕೆಲವೇ ಹೊತ್ತಿನಲ್ಲೇ ಹೆಚ್.ಡಿ.ರೇವಣ್ಣ ಕೂಡ ಸಭೆಯಿಂದ ಹೋಗಿದ್ದಾರೆ. ಅಂದಹಾಗೇ ಹಾಸನ ಟಿಕೆಟ್ ವಿಚಾರದಲ್ಲಿ ಇನ್ನೂ ಸರಿಯಾದ ನಿರ್ಧಾರವಾಗಿಲ್ಲ ಅಂತಾ ಹೇಳಲಾಗುತ್ತಿದೆ. ಭವಾನಿ ರೇವಣ್ಣ ಹಾಸನ ಕ್ಷೇತ್ರದ ಟಿಕೆಟ್ ಬೇಕೆ ಬೇಕು ಅಂತಾ ಹಟ ಹಿಡಿದಿದ್ದು, ಆದರೆ ಹೆಚ್.ಡಿ.ಕುಮಾರಸ್ವಾಮಿ ಸ್ವರೂಪ್ ರನ್ನು ಕಣಕ್ಕಿಳಿಸಲು ಒಲವು ತೋರಿದ್ದಾರೆ. ಮೊನ್ನೆಯಷ್ಟೇ ತೀರಾ ತಲೆಕೆಡಿಸಿಕೊಂಡ ಕುಮಾರಸ್ವಾಮಿಯವರು ಹಾಸನಕ್ಕೆ ಸ್ವರೂಪ್, ಭವಾನಿ ರೇವಣ್ಣ ಬಿಟ್ಟು ಬೇರೆ ಅಭ್ಯರ್ಥಿ ಘೋಷಿಸ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.
ಇಂದು ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದರು. ಹಾಸನ ಅಭ್ಯರ್ಥಿಯನ್ನೂ ಸೇರಿಸಿ ಟಿಕೆಟ್ ಬಿಡುಗಡೆಯಾಗಲಿದೆ ಎಂದಿದ್ದರು. ಆದರೆ ಭಾನುವಾರ ರಾತ್ರಿ ದೇವೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಹಾಸನ ಟಿಕೆಟ್ ಸಂಬಂಧ ಒಮ್ಮತ ಮೂಡಿಲ್ಲ ಎನ್ನಲಾಗಿದೆ. ಕುಮಾರಸ್ವಾಮಿ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಕುಟುಂಬಕ್ಕಿಂತ ಪಕ್ಷದ ಕಾರ್ಯಕರ್ತರು ಮುಖ್ಯ ಎಂದು ಹೇಳಿದ್ದಾರೆ. ಹೀಗಾಗಿ ದೊಡ್ಡಗೌಡರು ಈ ಸಮಸ್ಯೆ ಹೇಗೆ ಬಗೆಹರಿಸ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.