ಬೆಂಗಳೂರು: ಜೆಡಿಎಸ್ ಮುಖಂಡ ಸ್ವರೂಪ್ ಜೊತೆ ಮಾತನಾಡಿದ್ದೇನೆ, ಅವರು ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ರಾಜಕೀಯದಲ್ಲಿ ಇವೆಲ್ಲಾ ಸಹಜ. ಸ್ವರೂಪ್ ಜೊತೆ ಮಾತನಾಡಿದ್ದೇನೆ, ಎ.ಟಿ ರಾಮಸ್ವಾಮಿ ಕೂಡ ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಜೆಡಿಎಸ್‌ನಲ್ಲಿ ಇನ್ನೂ ಹಾಸನ ಟಿಕೆಟ್ ವಿಚಾರವಾಗಿ ಚರ್ಚೆ ನಡೆಯುತ್ತಲೇ ಇದೆ,
ಒಂದು ಕಡೆ ಭವಾನಿ ರೇವಣ್ಣ ಟಿಕೆಟ್ ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಸ್ವರೂಪ್ ಟಿಕೆಟ್ ಘೋಷಣೆ ಯಾಗದಿದ್ರೂ ಕ್ಷೇತ್ರದ ಜನರ ಸಮಸ್ಯೆ ಆಲಿಸುತ್ತಾ, ಜನರ ಜೊತೆಗೆ ಸಂಪರ್ಕ ಚೆನ್ನಾಗಿಟ್ಟುಕೊಂಡಿ ದ್ದಾರೆ. ಇದರ ಮಧ್ಯೆ ಡಿಕೆಶಿವಕುಮಾರ್ ಎಂಟ್ರಿಯಾಗಿದ್ದು, ಸ್ವರೂಪ್ ಜೊತೆಗೆ ಮಾತುಕತೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಅಂದಹಾಗೆ ಹೆಚ್ಡಿ ಕುಮಾರಸ್ವಾಮಿ ಬೆಂಬಲಿತ ಅಭ್ಯರ್ಥಿ ಸ್ವರೂಪ್ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಸೇರಲು ರೆಡಿಯಾಗಿದ್ದಾರೆ ಎನ್ನಲಾಗಿದೆ. ಹಾಸನದ ಬೇಲೂರಿನಲ್ಲಿ ಡಿ.ಕೆ ಶಿವಕುಮಾರ್ ಪ್ರಜಾಧ್ವನಿ ಸಮಾವೇಶ ಯಾತ್ರೆ ಮಾಡಿದ್ದಾರೆ. ಜೊತೆಗೆ ಶೀಘ್ರದಲ್ಲೇ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.