ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಫೈಟ್ ನಡುವೆ ಜೆಡಿಎಸ್ ವರಿಷ್ಠರು ಬೇರೆ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಅವರನ್ನು ಬಿಟ್ಟು ಇವರ್ಯಾರು ಅನ್ನೋ ಅನುಮಾನ ಶುರುವಾಗಿದೆ.
ಸ್ವರೂಪ್ ಹಾಗೂ ಭವಾನಿ ರೇವಣ್ಣ ಹೆಸರಿನ ನಡುವೆ ಮತ್ತೊಂದು ಹೆಸರು ಕೇಳಿ ಬಂದಿದೆ. ಹಾಸನ ಅಖಾಡದಲ್ಲಿ ನಮ್ಮದೇ ಹವಾ ಎಂದು ಬೀಗುತ್ತಿದ್ದ ಸ್ವರೂಪ್, ಭವಾನಿ ರೇವಣ್ಣಗೆ ಶಾಕ್ ಎದುರಾಗಿದೆ. ಬಲ್ಲ ಮೂಲಗಳ ಪ್ರಕಾರ ಜೆಡಿಎಸ್ನ ಹಿರಿಯ ನಾಯಕ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡರನ್ನು ಕಣಕ್ಕಿಳಿಸಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ವರೂಪ್ಗೆ ಟಿಕೆಟ್ ನೀಡಿದರೆ ಭವಾನಿ ಬೆಂಬಲಿಗರು ಸಿಡಿದೇಳುತ್ತಾರೆ ಅನ್ನೋದು ಸಹಜವಾಗಿ ಗೊತ್ತಿರೋ ವಿಚಾರ.. ಹಾಗಂತ ಭವಾನಿಗೆ ಟಿಕೆಟ್ ನೀಡಿದರೆ ಸ್ವರೂಪ್ ಬೆಂಬಲಿಗರು ಸುಮ್ಮನಿರಲ್ಲ, ಹೀಗಾಗಿ ವರಿಷ್ಟರು ಕೊಂಚ ಮುಂದೆ ಹೋಗಿ ಕೆ.ಎಂ.ರಾಜೇಗೌಡರಿಗೆ ಟಿಕೆಟ್ ನೀಡಲಿದ್ದಾರೆ ಅನ್ನೋ ಸುದ್ದಿ ಕೇಳಿ ಬರ್ತಾ ಇದೆ. ಹೆಚ್.ಡಿ.ರೇವಣ್ಣ ಕೆ.ಎಂ.ರಾಜೇಗೌಡ ಅವರೊಂದಿಗೆ ಈಗಾಗಲೇ ಎರಡು ಬಾರಿ ಗೌಪ್ಯವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ಇನ್ನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಒಪ್ಪಿದ ಕೆ.ಎಂ.ರಾಜೇಗೌಡ ಅವರು ಹಾಸನದಲ್ಲಿ ತಮ್ಮ ಬೆಂಬಲಿಗರೊಂದಿಗೆ ಟೆಂಪಲ್ ರನ್ ಆರಂಭಿಸಿದ್ದಾರೆ. ರಾಜೇಗೌಡ ಅವರ ಉಮೇದುವಾರಿಕೆಗೆ ವರಿಷ್ಠರು ಕೂಡಾ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.