ಲಕ್ನೋ : 9 ದಿನಗಳ ವಿರಾಮ ಪಡೆದಿದ್ದ ಭಾರತ್ ಜೋಡೋ ದೆಹಲಿಯಿಂದ ಯುಪಿ ಕಡೆಗೆ ಸಾಗುತ್ತಿದ್ದು, ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ ಬಳಿಕ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಹಾಥ್ ಸೇ ಹಾಥ್ ಜೋಡೋ ಯಾತ್ರೆಯನ್ನು ನಡೆಸಲು ಕಾಂಗ್ರೆಸ್ ಮುಂದಾಗಿದೆ.
ಇದೀಗ ಒಂಬತ್ತು ದಿನಗಳ ಬ್ರೇಕ್ ಬಳಿಕ ಕೇಂದ್ರ ಸರ್ಕಾರದ ವಿರುದ್ಧದ ಹೋರಾಟವನ್ನು ರಾಹುಲ್ ಮುನ್ನಡೆಸಲಿದ್ದಾರೆ. ಭಾರತ ಜೋಡೋ ಯಾತ್ರೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಇದೇ 26 ಕ್ಕೆ ಮುಕ್ತಾಯವಾಗಲಿದೆ. ಸಂಪನ್ನದ ಬಳಿಕ ಯಾತ್ರೆಯ ಸಂದೇಶವನ್ನು ದೇಶಾದ್ಯಂತ ಹರಡಲು ಹಾಥ್ ಸೇ ಹಾಥ್ ಜೋಡೋ ಅಭಿಯಾನ ಪ್ರಾರಂಭಿಸಲು ಕಾಂಗ್ರೆಸ್ ಸಜ್ಜಾಗಿದೆ.ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಹಾಥ್ ಸೇ ಹಾಥ್ ಜೋಡೋ ಅಭಿಯಾನದ ಜವಾಬ್ದಾರಿ ವಹಿಸಲಾಗಿದೆ.
ಮಹಿಳೆಯರ ಮೇಲೆ ವಿಶೇಷ ಗಮನ ಹರಿಸಲು ಈ ಅಭಿಯಾನಕ್ಕೆ ಪಕ್ಷ ಮುಂದಾಗಿದೆ.’ಭಾರತ್ ಜೋಡೋ ಯಾತ್ರೆಯ ನಂತರ ಕಾಂಗ್ರೆಸ್ ಎರಡು ತಿಂಗಳ ಕಾಲ ಹಾಥ್ ಸೇ ಹಾಥ್ ಜೋಡೋ ಅಭಿಯಾನವನ್ನು ನಡೆಸಲಿದೆ. ಇದರ ಮುಂದಾಳಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಹಿಳಾ ಸದಸ್ಯರೊಂದಿಗೆ ಪಾದಯಾತ್ರೆ ಮತ್ತು ರ್ಯಾಲಿಗಳನ್ನು ನಡೆಸಲಿದ್ದಾರೆ. ಭಾರತ್ ಜೋಡೋ ಯಾತ್ರೆಯ ಸಂದೇಶವನ್ನು ಜನರಿಗೆ ತಿಳಿಸಲು ಇದನ್ನು ಹಮ್ಮಿಕೊಳ್ಳಲಾಗಿದೆ.