ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಒಂದೆಡೆ ಪಕ್ಷಾಂತರದ ಸದ್ದು ಜೋರಾಗಿ ಕೇಳಿಬರುತ್ತಿದೆ. ಬಿಜೆಪಿಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಸಾಲಾಗಿ ನಿಂತಿದ್ದಾರೆ ಎಂಬ ಗುಸುಗುಸು ಕೂಡ ಇದೆ. ಸದ್ಯ ಬಿಜೆಪಿಯ ಇಬ್ಬರು ಶಾಸಕರ ನಡೆಯು ಅವರ ಕಾಂಗ್ರೆಸ್ ಸೇಪರ್ಡೆಗೆ ನೀಡಿರುವ ಸುಳಿವು ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ವಿಭಿನ್ನ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುವುದು ಗೊತ್ತಿರುವ ವಿಚಾರ. ಇದೇ ವಿಚಾರವಾಗಿ ಉಭಯ ಪಕ್ಷಗಳು ಕಚ್ಚಾಟ ನಡೆಸುವುದೂ ಸಾಮಾನ್ಯ.
ಆದರೆ, ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಕೆ.ಗೋಪಾಲಯ್ಯ ಅವರ ಇತ್ತೀಚಿನ ನಡೆಯು ಅವರು ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ಪುಷ್ಠಿ ನೀಡುವಂತಿದೆ.
ಕಾಂಗ್ರೆಸ್‌ನ ಗೃಹಲಕ್ಷ್ಮಿಗೆ ಬಿಜೆಪಿಯ ಎಸ್.ಟಿ.ಸೋಮಶೇಖರ್ ಸಾಥ್
ಇಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗುತ್ತಿದ್ದಂತೆ ಇತ್ತ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರ ಯಶವಂತಪುರ ಕ್ಷೇತ್ರದಲ್ಲೂ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯ್ತು.
ಸೋಮಶೇಖರ್ ಅವರು ಬಿಜೆಪಿಯವರಾದರೂ ಕಾಂಗ್ರೆಸ್ ಯೋಜನೆಗೆ ಕಾರ್ಯಕ್ರಮಕ್ಕೆ ಹೆಚ್ಚು ಆಸಕ್ತಿ ತೋರುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಅಲ್ಲದೆ, ಇದು ಸೋಮಶೇಖರ್ ಅವರು ಕಾಂಗ್ರೆಸ್ ಪಕ್ಷ ಸೇರುವ ಸುಳಿವು ಎಂಬ ಮಾತುಗಳೂ ಕೇಳಿಬರುತ್ತಿವೆ.
ಹಂಸಲೇಖ ಅವರನ್ನು ಸನ್ಮಾನಿಸಿದ ಗೋಪಾಲಯ್ಯ!
ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಈ ಹಿಂದೆ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎಂದು ಬಿಜೆಪಿಯವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಕಾಂಗ್ರೆಸ್ ಸರ್ಕಾರವು ಹಂಸಲೇಖ ಅವರನ್ನೇ ಈ ಬಾರಿಯ ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಿದೆ. ಇದನ್ನು ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಅವರು ಸ್ವಾಗತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಗೋಪಾಲಯ್ಯ ಕೂಡ ಕಾಂಗ್ರೆಸ್ ಸೇರ್ತಾರೆ ಅನ್ನೋ ವದಂತಿಗಳು ಹಬ್ಬಿತ್ತು. ನಾನು ಬಿಜೆಪಿ ಪಕ್ಷ ಬಿಡಲ್ಲ ಎಂದೂ ಅವರು ಹೇಳಿದ್ದರು. ಆದರೆ ಇದೀಗ ಗೋಪಾಲಯ್ಯ ಅವರು ಕಾಂಗ್ರೆಸ್ ಪಕ್ಷದ ಮೇಲೆ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದು, ಕಾಂಗ್ರೆಸ್ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ.
ಈ ಮೂಲಕ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮುನ್ಸೂಚನೆ ನೀಡಿದ್ದಾರೆ ಎಂದೂ ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.