ಮಂಡ್ಯ: ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಒಟ್ಟು 260 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ಡೇರಿ ನಿರ್ಮಾಣವಾಗಿದೆ. ನಿತ್ಯ 10 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಲಿದೆ. ಮುಂದಿನ ದಿನಗಳಲ್ಲಿ 14 ಲಕ್ಷ ಲೀಟರ್ ಮಾಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದರು.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಮೆಗಾ ಡೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇದೇ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಭಾಗಿಯಾಗಿದ್ದರು. ‘ನಾನಿಲ್ಲಿಗೆ ರಾಜಕೀಯ ಮಾಡಲು ಬಂದಿಲ್ಲ. ಕೇಂದ್ರ ಸಚಿವ ಅಮಿತ್ ಶಾ ಜತೆ ಭಾಗವಹಿಸಿರುವ ಕಾರ್ಯಕ್ರಮ ರಾಜಕೀಯದ್ದಲ್ಲ’ ಎಂದು ಹೇಳಿದರು.
ದೇಶದ ಗೃಹ ಮಂತ್ರಿಗಳು ಸಹಕಾರ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಗಮನ ಹರಿಸಿದ್ದಾರೆ. ಹಲವು ಇಲಾಖೆಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮತ್ತು ನಷ್ಟದ ಕಾರಣಗಳನ್ನು ತಿಳಿದುಕೊಳ್ಳುವ ಸಲುವಾಗಿ ನಮ್ಮ ಜೊತೆ ಇದ್ದಾರೆ. ಇದರಲ್ಲಿ ರಾಜಕೀಯ ಬೇಡ. ಅಮಿತ್ ಶಾ ಅವರ ವ್ಯಕ್ತಿತ್ವ ಬಹಳ ದೊಡ್ಡದು ಎಂದು ದೇವೇಗೌಡ ಬಣ್ಣಿಸಿದರು.
ನಾನು ಪ್ರಧಾನಿಯಾಗಿದ್ದಾಗ ರಾಜ್ಯದಲ್ಲಿ 12 ಸೊಸೈಟಿಗಳು ಇದ್ದವು. ಇವುಗಳನ್ನು ಎಚ್.ಡಿ. ರೇವಣ್ಣ ಒಂದುಗೂಡಿಸಿದರು, ಈ ವಿಚಾರವಾಗಿ ಕೇಂದ್ರ ಗೃಹ ಸಚಿವರಿಗೆ ನಾನು ಆಭಾರಿ. ಅವರ ಬಗ್ಗೆ ನನಗೆ ಬಹಳ ಗೌರವವಿದೆ ಎಂದು ಹೇಳಿದರು.