ಬೆಂಗಳೂರು: ಜೆಡಿಎಸ್ ತನ್ನ ಘೋಷಿತ ಹಾಗೂ ಸಂಭವನೀಯ ಅಭ್ಯರ್ಥಿಗಳಿಗೆ ಪಾದಯಾತ್ರೆ ಹಾಗೂ ಗ್ರಾಮ ವಾಸ್ತವ್ಯದ ಮೂಲಕ ಮತದಾರರ ಸೆಳೆಯಿರಿ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪತ್ರದ ಮೂಲಕ ಸೂಚಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ವತಿಯಿಂದ ಗುರುತಿಸಿರುವ 123 ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳು ಪಂಚರತ್ನ ಯೋಜನೆಯನ್ನು ಆಯಾ ಕ್ಷೇತ್ರದ ಜನರಿಗೆ ಮನವರಿಕೆ ಮಾಡಿಕೊಡಬೇಕು. ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಕುಮಾರಸ್ವಾಮಿ ಜೊತೆಗೆ ರಾಲಿ, ಜನಸಂಪರ್ಕಸಭೆ, ಗ್ರಾಮ ವಾಸ್ತವ್ಯದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದ್ದಾರೆ.
ಪಕ್ಷದ ಬಲವರ್ಧನೆ ಮತ್ತು ಸಂಘಟನೆ ಜೊತೆಗೆ ಕ್ಷೇತ್ರದ ಜನತೆಯ ಕುಂದು-ಕೊರತೆಗಳನ್ನು ಆಲಿಸಿ, ಪರಿಹಾರ ಕಂಡುಕೊಳ್ಳುವುದರೊಂದಿಗೆ, ಮತದಾರರ ನಾಡಿ-ಮಿಡಿತ ಅರಿತುಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಪಕ್ಷದ ವತಿಯಿಂದ ಗುರುತಿಸಿರುವ 123 ಮತ ಕ್ಷೇತ್ರಗಳಲ್ಲಿ ನಿಯೋಜಿತ ಅಭ್ಯರ್ಥಿಗಳು ಪಾದಯಾತ್ರೆ ಮತ್ತು ಗ್ರಾಮ ವಾಸ್ತವ್ಯಗಳನ್ನು ಕೈಗೊಂಡರೆ, ಮುಂಬರುವ 2023ರ ಚುನಾವಣೆಯಲ್ಲಿ ಪಕ್ಷ ನಿಚ್ಚಳ ಬಹುಮತ ಪಡೆಯುವಲ್ಲಿ ಯಾವುದೇ ಸಂಶಯವಿಲ್ಲ. ತಾವೆಲ್ಲರೂ ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಶ್ರಮಿಸುತ್ತೀರೆಂದು ಭಾವಿಸುತ್ತೇನೆ ಎಂದು ಬರೆದಿದ್ದಾರೆ.