ತುಮಕೂರು: ಇವರೇನು ನನ್ನ ಕ್ಷೇತ್ರಕ್ಕೆ ಬಂದು ರಾಮ ಮಂದಿರ ನಿರ್ಮಾಣ ಮಾಡುವುದು ಬೇಕಾಗಿಲ್ಲ. ಒಕ್ಕಲಿಗ ಸ್ವಾಮೀಜಿಗಳನ್ನು ಕರೆತಂದು ನಾನೇ ಮಂದಿರ ನಿರ್ಮಾಣ ಮಾಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ನಂಗೆ ದೇವರು ಇನ್ನೂ ಶಕ್ತಿ ಕೊಟ್ಟಿದ್ದಾನೆ. ಬೇರೆ ರಾಜ್ಯದಿಂದ ಯಾರನ್ನೋ ಕರೆತಂದು ಚುನಾವಣೆ ಸಮಯದಲ್ಲಿ ಇದೆಲ್ಲಾ ಮಾಡೋದು ಬೇಡ. ಬಿಜೆಪಿಯವರ ಆಟ ಮುಗಿಯುತ್ತಾ ಬಂತು, ಇದು ಇವರ ಕೊನೆಯ ಅಧ್ಯಾಯ ಎಂದು ಹೇಳಿದರು.
ರಾಮನಗರ ಜಿಲ್ಲೆಯಲ್ಲಿರುವ ರಾಮದೇವರ ಬೆಟ್ಟಕ್ಕೆ ಯುಪಿ ಸಿಎಂ ಕರೆತಂದು ರಾಮ ಮಂದಿರ ನಿರ್ಮಾಣಕ್ಕೆ ಫೌಂಡೇಶನ್ ಹಾಕುವ ಅವಶ್ಯಕತೆ ಇಲ್ಲ. ನಮ್ಮ ಸುತ್ತೂರು ಮಠಾಧೀಶರನ್ನು ಮತ್ತು ಆದಿಚುಂಚನಗಿರಿ ಶ್ರೀಗಳನ್ನು ಕರೆತಂದು ನಾನೇ ಮಾಡುತ್ತೇನೆ ಎಂದರು.ಇವರದ್ದೇ ಸರ್ಕಾರವಿದೆ. ಮೂರುವರೆ ವರ್ಷದಿಂದ ರಾಮ ಮಂದಿರ ನಿರ್ಮಾಣ ಮಾಡದೇ ಇದ್ದವರು ಇವಾಗ ಯಾಕೆ ನಿರ್ಮಾಣ ಮಾಡ್ತಿವಿ ಎಂದು ಘೋಷಣೆ ಮಾಡ್ತಾರೆ? ಎಂದು ಪ್ರಶ್ನಿಸಿದರು.
ಐದು ವರ್ಷ ಸರ್ಕಾರವಿದ್ದಾಗ ಮಾಡಬಹುದಿತ್ತಾಲ್ವಾ?ಜನರ ಹಣ ಲೂಟಿ ಹೊಡೆದು ಅದರಿಂದ ರಾಮ ಮಂದಿರ ನಿರ್ಮಾಣ ಮಾಡ್ತಾರೆ. ರಾಮನಗರದಲ್ಲಿ ಬಿಜೆಪಿಯ ಆಟ ನಡೆಯಲ್ಲ, ಬಿಜೆಪಿಯವರನ್ನು ಜನ ರಾಜ್ಯದಿಂದ ಹೊರಗೆ ಇಡೋ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ಬರ್ತಾ ಇದೆ. ಇದೆಲ್ಲಾ ಚುನಾವಣೆಗೋಸ್ಕರ ಎಂದು ವಾಗ್ದಾಳಿ ನಡೆಸಿದರು.