ಬೆಂಗಳೂರು: “ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಮಂಡ್ಯದಲ್ಲಿ ಎಟಿಎಂ ಬಗ್ಗೆ ಮಾತನಾಡಿದ್ದಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಎಂದರೆ ಹೀಗೆಯೇ. ಸುಳ್ಳು ಹೇಳುವುದಕ್ಕೆ ಸಂಕೋಚ ಬೇಡವೇ? ಕರ್ನಾಟಕ ಮಾತ್ರವಲ್ಲ, ಇಡೀ ಭಾರತವೇ ಭಾರತೀಯ ಜನತಾ ಪಕ್ಷದ ಎಟಿಎಂ ಆಗಿದೆ. ಇದು ಸುಳ್ಳಾ?” ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೇ ಒಂದು ಕುಟುಂಬಕ್ಕೆ ಎಟಿಎಂ ಆಗುತ್ತದೆ ಎಂದು ವಾಗ್ದಾಳಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿ, “ಬಿಜೆಪಿ ಎಂದರೆ ಎಟಿಎಂಗಳ ನ್ಯಾಷನಲ್ ಟೀಮ್. ಸತ್ಯ ಹೀಗಿದ್ದರೂ ಮಂಡ್ಯದಲ್ಲಿ ಬಂದು ಎಟಿಎಂ ಎಂದು ಟಮ್ ಟಮ್ ಹೊಡೆದರೆ ಯಾರು ನಂಬುತ್ತಾರೆ ಬಿಜೆಪಿ ನಾಯಕರೇ?ಎಂದು ಹೇಳಿದರು.
ಕೇಂದ್ರದ ಗೌರವಾನ್ವಿತ ಗೃಹ ಮಂತ್ರಿ ಅಮಿತ್ ಶಾ ಅವರು ಮಂಡ್ಯ ಜನರಿಗೆ ಮಂಕುಬೂದಿ ಎರಚಲು ವಿಫಲ ಪ್ರಯತ್ನ ನಡೆಸಿದ್ದಾರೆ. ಅವರ ಪಕ್ಷದ ಕೆಲ ನಾಯಕರು ಹೊಡೆಯುತ್ತಿರುವ ಅಪಪ್ರಚಾರದ ಜಾಗಟೆಗೆ ಡ್ರಮ್ಮು ಬಾರಿಸುವ ಕೆಲಸ ಮಾಡಿದ್ದಾರೆ. ಮಂಡ್ಯದವರನ್ನು ಮೋಸ ಮಾಡಲು ಆಗುವುದಿಲ್ಲ ಅಮಿತ್ ಶಾ ಜೀ!!”, ಎಂದು ವಾಗ್ದಾಳಿ ಮಾಡಿದ್ದಾರೆ.
ಹಾಗೇ “ಯಾರಿಗೆ ಯಾವುದು ಎಟಿಎಂ? ಎನ್ನುವುದು ಕರ್ನಾಟಕಕ್ಕೆ ಗೊತ್ತು. 40% ಕಮೀಷನ್ ಯಾರ ಎಟಿಎಂಗೆ ಹೋಯಿತು? ಪಿಎಸ್ಐ ಹಗರಣ ಯಾರ ಎಟಿಎಂ? ಕೋವಿಡ್ ಸಾವುಗಳ ಮೇಲೆ ದೋಚಿದ ಹಣ ಯಾವ ಹುಂಡಿಗೆ ಹೋಯಿತು? ಅಪರೇಷನ್ ಕಮಲಕ್ಕೆ ಯಾವ ಎಟಿಎಂನಿಂದ ಬಂತು?”, ಎಂದು ಆಕ್ರೋಶ ವ್ಯಕ್ತಪಡಿಸಿದರು.