ತಿಪಟೂರು: ನನಗೆ ಅಧಿಕಾರ ಸಿಕ್ಕಿದ ತಕ್ಷಣ ಹೊನ್ನವಳ್ಳಿ ಭಾಗಕ್ಕೆ ಶಾಶ್ವತ ನೀರಾವರಿ ಕಲ್ಪಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಜಾತ್ಯತೀತ ಜನತಾದಳಕ್ಕೆ ಮತ ನೀಡಿ, ಮುಂದಿನ ಬಾರಿ ಒಮ್ಮೆ ಅಧಿಕಾರ ಕೊಟ್ಟು ನೋಡಿ ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
ನಾನು ಹಾಗೂ ನಮ್ಮ ಪಕ್ಷ ಹೇಳಿದಂತೆ, ಮಾತುಕೊಟ್ಟಂತೆ ನಡೆದುಕೊಳ್ಳುತ್ತೇವೆ, ಬಿಜೆಪಿ ಹಾಗೂ ಕಾಂಗ್ರೆಸ್ ಪರಸ್ಪರ ರಾಜಕೀಯ ಕೆಸರೆರಚಾಟ, ದೊಂಬರಾಟ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡು ಎಂದು ಕಿಡಿಕಾರಿದರು.
ರೈತರ, ಗ್ರಾಮಗಳ, ಮಹಿಳೆಯರ, ಯುವಕರ ಅಭಿವೃದ್ಧಿಯಾಗಬೇಕಾದರೆ ಅದು ಜೆಡಿಎಸ್‌ನಿಂದ ಮಾತ್ರ ಸಾಧ್ಯ. ಮಾಜಿ ಪ್ರಧಾನಿ ದೇವೇಗೌಡರ ಕೊನೆ ಆಸೆಯಂತೆ ರೈತರ ಸಮೃದ್ಧಿ ಜೀವನ, ಹಳ್ಳಿಗಳ ಏಳಿಗೆಯನ್ನು ಕಣ್ತುಂಬಿಕೊಳ್ಳಬೇಕಾದರೆ ನಾವು ಅಧಿಕಾರಕ್ಕೆ ಬರಬೇಕಾಗಿದೆ. ನೀವು ಅಧಿಕಾರ ಕೊಟ್ಟಾಗ, ನನ್ನ ಮಾತು ತಪ್ಪಿದರೆ ಪಕ್ಷ ವಿಸರ್ಜಿಸಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ಎಲ್ಲ 11 ಸ್ಥಾನಗಳನ್ನು ಜೆಡಿಎಸ್ ಗೆಲ್ಲುವುದು ಖಚಿತ. ಹಾಗಾಗಿ ಇಲ್ಲಿನ ಅಭ್ಯರ್ಥಿ ಕೆ.ಟಿ. ಶಾಂತಕುಮಾರ್‌ಗೆ ನಿಮ್ಮ ಮತ ಹಾಕಿ ಎಂದು ಮನವಿ ಮಾಡಿದರು.