ಹಾಸನ: ಅರಸೀಕೆರೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಸನ ಸಂಸದರ ಕಚೇರಿ ಬಳಿ ಜಮಾಯಿಸಿದ್ದು, ಅರಸೀಕೆರೆ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸುವಂತೆ ಆಗ್ರಹಿಸಿದ್ದಾರೆ. ಇತ್ತ ಕಡೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಕೊಂಚ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದು, ಕಾಂಗ್ರೆಸ್ ಸೇರಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.
ನಮ್ಮ ಜೆಡಿಎಸ್ ಕಾರ್ಯಕರ್ತರ ಕೆಲಸವನ್ನೇ ಮಾಡಿ ಕೊಡುತ್ತಿಲ್ಲ. ಇತ್ತಿಚೆಗೆ ಜೆಡಿಎಸ್ ಅಡಿಯಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಅವರು ಭಾಗಿ ಆಗಿಲ್ಲ. ನಮ್ಮ ಕಣ್ಣ ಮುಂದೆಯೇ ಕಾಂಗ್ರೆಸ್ ಕಾರ್ಯಕರ್ತರಿಗೆ ಮಣೆ ಹಾಕುತ್ತಿದ್ದಾರೆ. ಆದಷ್ಟು ಬೇಗ ನಮ್ಮ ಕ್ಷೇತ್ರದ ಸಮಸ್ಯೆ ಬಗೆಹರಿಸಿ ಎಂದು ಜೆಡಿಎಸ್ ಕಾರ್ಯಕರ್ತರು ಶಿವಲಿಂಗೇಗೌಡ ವಿರುದ್ಧ ಗರಂ ಆಗಿದ್ದಲ್ಲದೇ ಅಭ್ಯರ್ಥಿ ಘೋಷಣೆಗೆ ಬಿಗಿಪಟ್ಟು ಹಿಡಿದರು . ಇದಕ್ಕೆ ಸ್ಪಂದಿಸಿದ ಹೆಚ್.ಡಿ. ರೇವಣ್ಣ ಜ.20ರೊಳಗೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸುತ್ತೇವೆ. ಸಮಯ ಕೊಡೋಣ ಎಂದು ಹೆಚ್ಡಿಡಿ, ಹೆಚ್ಡಿಕೆ ಸಹ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಹದಿನೈದರವರೆಗೆ ಸಮಯ ಕೊಡೋಣ ಎಂದು ಕುಮಾರಸ್ವಾಮಿ ದೇವೇಗೌಡರು ಕೂಡ ಹೇಳಿದ್ದಾರೆ. ಹಾಗಾಗಿ ಅವರಿಗೆ ಟೈಂ ಕೊಡೋಣ ಆಮೇಲೆ ನಮ್ಮಿಂದ ಹಿಂಗಾಯ್ತು ಎಂದು ಅಪವಾದ ಬರುವುದು ಬೇಡ. ಹೊಳೆನರಸೀಪುರ ನನಗೆ ಒಂದು ಕಣ್ಣಾದ್ರೆ ನಾನು ಜೀವ ಇರುವವರೆಗೆ ಅರಸೀಕೆರೆ ಮರೆಯಲ್ಲ. ರಾತ್ರಿ ಹನ್ನೆರಡು ಗಂಟೆಗೆ ಬರಲಿ ನಿಮಗಾಗಿ ದುಡಿಯದೆ ಹೋದರೆ ನಾನು ದೇವೇಗೌಡರ ಮಗ ಅಲ್ಲ. ಎಲ್ಲವನ್ನು ಅವರಿಗೆ ಬಿಡೋಣ ಹದಿನೈದರ ಮೇಲೆ ತೀರ್ಮಾನ ಮಾಡೋಣ ಎಂದು ಹೇಳಿದರು.
ಶಿವಲಿಂಗೇಗೌಡರ ರಾಜಕೀಯ ನಡೆ ನಿಗೂಢವಾಗಿದ್ದು, ಜೆಡಿಎಸ್ ನಲ್ಲಿ ಉಳಿತಾರಾ ? ಅಥವಾ ಕಾಂಗ್ರೆಸ್ ಸೇರ್ತಾರ ಅನ್ನೋದು ಗೊತ್ತಾಗಬೇಕಿದೆ.