ಬೆಂಗಳೂರು: ಜೆಡಿಎಸ್ ಜನರ ಎಟಿಎಂ. ನಮ್ಮ ಪಾಲಿಗೆ ಎಟಿಎಂ ಎಂದರೆ ‘ಎನಿ ಟೈಮ್ ಮನುಷ್ಯತ್ವ’ ನಿಮ್ಮ ಪಾಲಿಗೆ ಅದು ‘ಎನಿ ಟೈಮ್ ಮೋಸ’. ಸುಳ್ಳಿನ ಜಾಗಟೆ ಹೊಡೆದೇ ದೇಶವನ್ನು ಅದೋಗತಿಗೆ ತಳ್ಳಿದ್ದೀರಿ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ.
ಸ್ಥಳಕ್ಕೊಂದು ವೇಷ, ಕ್ಷಣಕ್ಕೊಂದು ಸುಳ್ಳು, ಇದು ಬಿಜೆಪಿ ನಿಜ ಸ್ವರೂಪವಾಗಿದೆ. ನೀವು ಸರ್ವಾಧಿಕಾರಿ ಹಿಟ್ಲರ್ ಸಂಪುಟದ ಗೊಬೆಲ್ಲನ ಹೊಸ ಅವತಾರ, ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುಬೇಕಾದ ಕರ್ಮ ನಿಮಗೇಕೆ ಬಂತು? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ, ಜೆಡಿಎಸ್ ಗೆದ್ದರೆ ಒಂದು ಕುಟುಂಬದ ಎಟಿಎಂ ಆಗುತ್ತದೆ ಎಂದು ಹೇಳಿದ್ದೀರಿ. JDS ಸರ್ಕಾರ ಬಂದರೆ ಆರೂವರೆ ಕೋಟಿ ಕನ್ನಡಿಗರ ಎಟಿಎಂ ಆಗುತ್ತದೆ. ರೈತರು, ಕಾರ್ಮಿಕರು, ದೀನ ದಲಿತರು, ವಿಕಲಚೇತನರ ಎಟಿಎಂ ಆಗುತ್ತದೆ ಎಂದರು.
ಬರೀ ಬೂಟಾಟಿಕೆ ಪಾರ್ಟಿ ಸುಳ್ಳುಕೋರರ ಸಂತೆ ಎನ್ನುವುದಕ್ಕೆ ಮಂಡ್ಯದಲ್ಲಿ ಸುಖಾಸುಮ್ಮನೆ ಅಲವತ್ತುಕೊಂಡ ನಿಮ್ಮ ಅಸತ್ಯದ ಹಾಹಾಕಾರದ ವರಸೆಯೇ ಸಾಕ್ಷಿ. ಸ್ಥಳಕ್ಕೊಂದು ವೇಷ, ಕ್ಷಣಕ್ಕೊಂದು ಸುಳ್ಳು. ಇದು ನಿಮ್ಮ ಪಕ್ಷದ ನಿಜ ಸ್ವರೂಪ ಎಂದು ಕಿಡಿಕಾರಿದರು.
ಕರ್ನಾಟಕದ ನಿಮ್ಮ ಬಿಜೆಪಿ ಸರಕಾರ ಕೇವಲ 40 ಪರ್ಸೆಂಟ್ ಸರಕಾರ ಅಲ್ಲವೇ ಅಲ್ಲ. ಅದು 55-60 ಪರ್ಸೆಂಟ್ ಸರಕಾರ!! ನಿಮಗೂ ಮಾಹಿತಿ ಇರುತ್ತದೆ, ಕರ್ನಾಟಕ ನಿಮ್ಮ ಪಕ್ಷಕ್ಕೂ ಎಟಿಎಂ ಹೌದಲ್ಲವೇ? ಈ ಸತ್ಯ ಯಾಕೆ ಮರೆಮಾಚಿದಿರಿ? ಮಂಡ್ಯ ಜನರ ಮುಂದೆ ನಿಮ್ಮ ದಮ್ಮು ತಾಕತ್ತು ನಡೆಯಲ್ಲ, ಅರಿತುಕೊಳ್ಳಿ ಎಂದರು.