ಬೆಂಗಳೂರು: ಏನ್ರೀ ಕಾಂಗ್ರೆಸ್ ನವರೇ, ಭರವಸೆ ಕೊಡಬೇಕಾದಾಗ ನಿಮಗೆ ತಲೆ ಇರಲಿಲ್ಲವಾ? ಈಗ ಮತ ಕೊಟ್ಟವರೆಲ್ಲಾ ಹಾದಿಬೀದಿಯವರು ಆಗಿಬಿಟ್ರಾ? ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕಿಡಿಕಾರಿದರು. ಮಾಧ್ಯಮಗಳ ಜತೆ ಮಾತನಾಡಿ, ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ನೈಜ ಬಣ್ಣ ಒಂದು ವಾರದಲ್ಲಿಯೇ ಬಯಲಿಗೆ ಬಂದಿದೆ ಎಂದು ಅಭಿಪ್ರಾಯಪಟ್ಟರು.
ಮೊದಲ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿಗಳನ್ನು ಜಾರಿಗೆ ತಂದೇ ತರುತ್ತೇವೆ ಎಂದು ಹೇಳಿದ್ದ ಈಗಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಈಗ ವರಸೆ ಬದಲಿಸಿ, ಷರತ್ತುಗಳು ಅನ್ವಯ ಆಗುತ್ತವೆ ಎನ್ನುತ್ತಿದ್ದಾರೆ, ಇದ್ಯಾವ ನ್ಯಾಯ ? ಎಂದು ಪ್ರಶ್ನಿಸಿದರು.
ಹಾದಿ ಬೀದಿಯಲ್ಲಿ ಹೋಗೋರಿಗೆಲ್ಲಾ ಗ್ಯಾರಂಟಿ ಯೋಜನೆ ಕೊಡಕ್ಕಾಗಲ್ಲ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಒಪ್ಪಲಾಗದು. ಗ್ಯಾರಂಟಿಗಳ ಭರವಸೆ ನೀಡಿದ್ದೀರಿ. ಜಾರಿ ಮಾಡಿ ಎಂದು ಜನರು ಕೇಳುತ್ತಿದ್ದಾರೆ. ವಿದ್ಯುತ್ ಬಿಲ್ ಕಟ್ಟುತ್ತಿಲ್ಲ, ಬಸ್ ಟಿಕೆಟ್ ಪಡೆಯಲು ನಿರಾಕರಿಸುತ್ತಿದ್ದಾರೆ. ನುಡಿದಂತೆ ನಡೆಯಬೇಕು, ಮಾತು ತಪ್ಪಿದರೆ ಜನರಿಗೆ ಮೋಸ ಮಾಡಿದಂತೆ ಆಗುತ್ತದೆ. ನಾವು ಜನರ ಪರ ನಿಲ್ಲುತ್ತೇವೆ ಎಂದು ಸ್ಪಷ್ಟಪಡಿಸಿದರು.